ದಕ್ಷರೀತಿ ಕಾರ್ಯನಿರ್ವಹಿಸಿದರೆ ಸರ್ಕಾರ ನಿಮ್ಮ ಜೊತೆಗಿದೆ: ತಪ್ಪು ಮಾಡಿ ಸಹಕಾರ ಬಯಸಬೇಡಿ
ಮೈಸೂರು

ದಕ್ಷರೀತಿ ಕಾರ್ಯನಿರ್ವಹಿಸಿದರೆ ಸರ್ಕಾರ ನಿಮ್ಮ ಜೊತೆಗಿದೆ: ತಪ್ಪು ಮಾಡಿ ಸಹಕಾರ ಬಯಸಬೇಡಿ

July 14, 2021

ಮೈಸೂರು,ಜು.13(ಎಂಕೆ)-ಸರ್ಕಾರ ನಿಮ್ಮ ಜೊತೆಗಿದೆ. ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿ, ಆದರೆ ತಪ್ಪು ಮಾಡಿದಾಗ ಸರ್ಕಾರದ ಸಹಕಾರ ಬಯಸಬೇಡಿ ಎಂದು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಮತ್ತು ನಗರ ಪೊಲೀಸ್ ಅಧಿಕಾರಿ ಗಳ ಪರಾಮರ್ಶನ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕರ್ನಾಟಕ ಪೊಲೀಸ್‍ಗೆ ಒಳ್ಳೆಯ ಹೆಸರಿದೆ. ಕೇಂದ್ರದ ಮಟ್ಟದಲ್ಲಿ ನಡೆಯುವ ದೊಡ್ಡ ದೊಡ್ಡ ತನಿಖೆಗಳಿಗೆ ರಾಜ್ಯ ಪೊಲೀಸರನ್ನು ನಿಯೋಜಿಸುವಂತೆ ಕೇಳುವ ಮಟ್ಟದಲ್ಲಿದೆ. ಮುಂದಿನ ದಿನಗಳಲ್ಲಿ ಸಣ್ಣ ತಪ್ಪುಗಳಿಂದಲೂ ಕಳಂಕ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ನಿಮ್ಮ ನಿಮ್ಮ ಠಾಣೆ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಅರಿವಿರಬೇಕು. ಹೊರಗಡೆ ಹೋದಾಗ ನಿಮ್ಮನ್ನು ಕಂಡು ಮಾತನಾಡಿಸುವ ಮಟ್ಟಕ್ಕೆ ಜನರ ವಿಶ್ವಾಸ ಗಳಿಸಿರಬೇಕು. ಕಾನ್‍ಸ್ಟೇಬಲ್‍ಗಳ ಜೊತೆಗೆ ಉತ್ತಮ ಸಂಬಂಧ ಇಟ್ಟು ಕೊಂಡಿರಬೇಕು. ಜನರ ಮನಸ್ಸಿನಲ್ಲಿ ಪೊಲೀಸ್ ಎಂದರೆ ಗೌರವ ಭಾವನೆ ಬರುವಂತೆ ನಡೆದುಕೊಳ್ಳಬೇಕು. ಗೂಂಡಾ ಗಳಿಗೆ ನೀವೇ ಹೆದರಿದರೆ, ಜನರು ನಿಮಗೆ ಹೆದರುವ ಬದಲು ಗೂಂಡಾಗಳಿಗೆ ಹೆದರುತ್ತಾರೆ. ಆದ್ದರಿಂದ ಗೂಂಡಾಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಗೂಂಡಾಯಿಸಂ ಎಂಬುದನ್ನು ಕಂಟ್ರೋಲ್ ಮಾಡದಿದ್ದರೆ, ಕಾನೂನು -ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ರೌಡಿಗಳು ಏನೇ ಮಾಡಿದರೂ ಸುಮ್ಮನಿದ್ದರೆ ನಿಮ್ಮ ಪವರ್ ಅನ್ನು ರೌಡಿ ಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ನಿಮ್ಮ ಸಕ್ಸಸ್ ಸರ್ಕಾರದ ಸಕ್ಸಸ್: ಪೊಲೀಸ್ ಸಿಬ್ಬಂದಿ ನೇಮಕಾತಿ, ಹೊಸ ಪೊಲೀಸ್ ಠಾಣೆಗಳ ನಿರ್ಮಾಣ, ವಸತಿ ಗೃಹಗಳ ನಿರ್ಮಾಣ ಸೇರಿದಂತೆ ಪೊಲೀಸ್ ಇಲಾಖೆಯ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನು ಕೂಲ ಮಾಡಿಕೊಡುವ ಮೂಲಕವೂ ಸರ್ಕಾರ ಪೊಲೀ ಸರ ಪರವಾಗಿ ಕೆಲಸ ಮಾಡುತ್ತಿದೆ. ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ನೀವು ಸಕ್ಸಸ್ ಕಂಡರೆ, ಸರ್ಕಾರ ಸಕ್ಸಸ್ ಆಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಕೆಲಸದಲ್ಲಿ ಯಶಸ್ವಿಯಾಗಬೇಕು ಎಂಬ ಮನಸ್ಸಿನಿಂದಲೇ ಕೆಲಸ ಮಾಡಿ. ಯಾವುದು ಅಸಾಧ್ಯವಲ್ಲ ಎಂದು ಆತ್ಮವಿಶ್ವಾಸ ಮೂಡಿಸಿದರು.

ಮೈಸೂರಿಗೆ ಮಹತ್ವ: ರಾಜ್ಯದಲ್ಲಿ ಬೆಂಗಳೂರಿಗೆ ಇರು ವಷ್ಟೇ ಮಹತ್ವ ಮೈಸೂರಿಗೂ ಇದೆ. ಏನೇ ಬದಲಾವಣೆ, ಸುಧಾರಣೆ ಮತ್ತು ಒಳ್ಳೆಯದಾಗಬೇಕಾದರೂ ಅದು ಮೈಸೂರಿನಿಂದಲೇ ಪ್ರಾರಂಭವಾಗುತ್ತದೆ. ಇಲ್ಲಿ ಬೇರೆ ಜಿಲ್ಲೆಗಳಂತೆಯೇ ಭೂಮಿ ಜಗಳ, ಜಾತಿ ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಅವುಗಳನ್ನು ತಡೆಗಟ್ಟುವ ಕೆಲಸವಾಗಬೇಕು. 2019ರಲ್ಲಿ ಜಿಲ್ಲೆಯಲ್ಲಾಗಿರುವ 44 ಕೊಲೆ ಪ್ರಕರಣಗಳಲ್ಲಿ 14 ಪ್ರಕರಣಗಳು ಎರಡು ವರ್ಷ ದಿಂದಲೂ ತನಿಖೆ ಹಂತದಲ್ಲಿವೆ ಎಂದರೆ ಅರ್ಥವೇನು? ಏನಾದರೂ ಪೊಲೀಸ್‍ನವರೇ ಕೊಲೆಗಾರರೊಂದಿಗೆ ರಾಜೀಯಾಗಿದ್ದೀರಾ? ಅಥವಾ ಕೊಲೆಗಾರರನ್ನು ಪತ್ತೆ ಮಾಡದೆ ಸುಮ್ಮನಿದ್ದೀರಾ? ಎಂದು ಪ್ರಶ್ನಿಸಿದ ಸಚಿವರು, ಸಾಧ್ಯವಾದಷ್ಟು ಬೇಗ ಪ್ರಕರಣಗಳು ಇತ್ಯರ್ಥವಾಗಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಈ ಕುರಿತು ಯಾವ್ಯಾವ ಠಾಣೆಗಳಲ್ಲಿ ಪ್ರಕರಣಗಳು ತನಿಖೆ ಪೂರ್ಣ ಗೊಳ್ಳದೆ ಬಾಕಿ ಉಳಿದಿವೆ ಎಂಬುದನ್ನು ತಿಳಿದು ಸೂಕ್ತ ಮಾರ್ಗದರ್ಶನ ನೀಡಬೇಕು. ಅವರಿಂದ ಆಗದಿದ್ದರೇ ಕೆಲಸದಿಂದಲೇ ತೆಗೆಯಿರಿ ಎಂದು ಸೂಚಿಸಿದರು.

ಸೈಬರ್ ಕ್ರೈಂ ಹೆಚ್ಚಳ: ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಮುಂದಿನ ಹತ್ತು ವರ್ಷ ಗಳಲ್ಲಿ ಸೈಬರ್ ಕ್ರೈಂ ಪ್ರಕರಣ ಬಾರೀ ಸಂಖ್ಯೆಯಲ್ಲಿ ಹೆಚ್ಚಾ ಗಲಿದೆ. ಆನ್‍ಲೈನ್‍ನಲ್ಲಿ ವಂಚಿಸುವ ಆರೋಪಿ ಎಲ್ಲಿರು ತ್ತಾನೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದು ಕೊಳ್ಳುವುದರಿಂದ ವಂಚನೆಗೊಳಗಾದವರಿಗೆ ಹಣವನ್ನು ವಾಪಸ್ ಕೊಡಿಸುವ ಕೆಲಸವನ್ನು ಮಾಡಬಹುದು. ಆದ್ದರಿಂದ ಸೈಬರ್ ಕ್ರೈಂ ಸಂಬಂಧಿತ ಪ್ರಕರಣದ ದೂರು ನೀಡುವವರು ಬಂದಾಗ ಸೈಬರ್ ಕ್ರೈಂ ಠಾಣೆಗೆ ಹೋಗಬೇಕು ಎಂದು ಅವರನ್ನು ಅಲೆದಾಡಿಸದೆ, ಮೊದಲು ಕ್ರಮ ತೆಗೆದುಕೊಂಡು ನಂತರ ಬೇಕಾದರೆ ಪ್ರಕರಣ ದಾಖಲಿಸಿಕೊಳ್ಳಿ ಎಂದರು.

Translate »