ಪತ್ನಿ ಹತ್ಯೆಗೆ ಯತ್ನಿಸಿದ  ಪತಿಗೆ 4 ವರ್ಷ ಜೈಲು
ಮೈಸೂರು

ಪತ್ನಿ ಹತ್ಯೆಗೆ ಯತ್ನಿಸಿದ  ಪತಿಗೆ 4 ವರ್ಷ ಜೈಲು

September 27, 2018

ಮೈಸೂರು: ಮಚ್ಚಿನಿಂದ ಹಲ್ಲೆ ಮಾಡಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ ರಾಯನಿಗೆ 4 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಜಿ.ಕುರುವತ್ತಿ ಅವರು ಇಂದು ತೀರ್ಪು ನೀಡಿದ್ದಾರೆ. ಹುಣಸೂರು ತಾಲೂಕು ಕೊತ್ತೇಗಾಲ ಗ್ರಾಮದ ನಿವಾಸಿ ಸಿದ್ದರಾಜು (60) ತನ್ನ ಪತ್ನಿ ಮಹದೇವಮ್ಮ ಅವರ ಹತ್ಯೆಗೆ ಯತ್ನಿಸಿ, ಶಿಕ್ಷೆಗೆ ಗುರಿಯಾದವನು.

ವಿವರ: ಈ ದಂಪತಿಗೆ 32 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಸಿದ್ದರಾಜು ಕೊತ್ತೇಗಾಲ ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್‍ನಿಂದ ಮತ್ತು ಖಾಸಗಿಯವ ರಿಂದ ಕಂತಿನ ಸಾಲ ಪಡೆದು ಹಣವನ್ನು ವ್ಯವಸಾಯಕ್ಕೆ ಬಳಸದೇ ಕುಡಿದು ಶೋಕಿ ಮಾಡುವ ಮೂಲಕ ದುಂದುವೆಚ್ಚ ಮಾಡುತ್ತಿದ್ದನಂತೆ. ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಪತ್ನಿ ಮಹದೇವಮ್ಮ ತನ್ನ ಪತಿಗೆ ದುಂದು ವೆಚ್ಚಕ್ಕೆ ಹಣ ಕೊಡದ ಕಾರಣ ಹಲವಾರು ಬಾರಿ ಆತ ಗಲಾಟೆ ಮಾಡಿದ್ದಾನೆ.

2016ರ ಜ.10ರಂದು ಬೆಳಿಗ್ಗೆ ಮಹದೇವಮ್ಮ ಜಮೀನಿನಲ್ಲಿ ಅವರೆಕಾಯಿ ಕೀಳುತ್ತಿದ್ದ ವೇಳೆ ಅಲ್ಲಿಗೆ ಬಂದ ಸಿದ್ದರಾಜು, ಮನೆ ವ್ಯವಹಾರವನ್ನು ತನ್ನಿಂದ ಕಿತ್ತುಕೊಂಡು ಕುಡಿಯಲು ಹಣ ಸಿಗದಂತೆ ಮಾಡಿದ್ದೀಯಾ ಎಂದು ಗಲಾಟೆ ಮಾಡಿ ಮಚ್ಚಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಆಕೆ ಓಡಿ ಹೋಗುತ್ತಿದ್ದಾಗ ಬೆನ್ನಟ್ಟಿ ಹೋಗಿ ಕೈ ಮತ್ತು ಕಾಲುಗಳಿಗೆ ಮಚ್ಚಿನಿಂದ ಕೊಚ್ಚಿ, ಸ್ಥಳಕ್ಕೆ ಅಕ್ಕ-ಪಕ್ಕದವರು ಬರುವುದನ್ನು ಗಮನಿಸಿ ಓಡಿ ಹೋಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಹದೇವಮ್ಮ ಹಲವು ತಿಂಗಳ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಈಕೆಯ ಪುತ್ರ ಪ್ರಕಾಶ್ ನೀಡಿದ ದೂರನ್ನು ದಾಖಲಿಸಿಕೊಂಡ ಹುಣಸೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ನ್ಯಾಯಾ ಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಿದ್ದರಾಜುವಿಗೆ ಶಿಕ್ಷೆ ವಿಧಿಸಿದ್ದಲ್ಲದೆ, ವಸೂಲಿಯಾಗುವ ದಂಡದ ಹಣದಲ್ಲಿ ಮಹದೇವಮ್ಮ ಅವರಿಗೆ 20 ಸಾವಿರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಜೀತ್‍ಕುಮಾರ್ ಡಿ.ಹಮಿಗಿ ವಾದ ಮಂಡಿಸಿದ್ದರು.

Translate »