ಬೇಲೂರಿನಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ
ಹಾಸನ

ಬೇಲೂರಿನಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ

July 2, 2019

ಬೇಲೂರು, ಜು.1- ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಸೋಮವಾರ ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವ ವೇದಿಕೆ, ಮಹಿಳಾ ಒಕ್ಕಲಿಗರ ಸಂಘದ ನೂರಾರು ಸದಸ್ಯರು ಪಟ್ಟಣದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಸೇತುವೆ ಸಮೀಪ ಇರುವ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಜನಪದ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಭಾರೀ ಮೆರವಣಿಗೆ ನಡೆಸಿದರು.

ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್.ಲಿಂಗೇಶ್, ನಾಡಪ್ರಭು ಕೆಂಪೇಗೌಡರ ಕೆಲಸಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ. ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಸಮುದಾಯಕ್ಕೂ ಬದುಕುವುದಕ್ಕೆ ಅವಕಾಶ ಮಾಡಿ ಕೊಟ್ಟು ಉತ್ತಮ ಆಡಳಿತ ನಡೆಸಿದರು. ರೈತರಿಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿದವರು. ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ನಿರ್ಮಾಣವಾಯಿತು ಎಂದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಮಾತನಾಡಿ, ಜಯಂತಿ ಆಚರಣೆ ಮುಖ್ಯವಲ್ಲ. ಅವರ ಆದರ್ಶ ಪಾಲಿಸಬೇಕು. ಅವರ ಇತಿಹಾಸ ತಿಳಿಯಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ವ್ಯಕ್ತಿಯಾಗಿ, ಆದರ್ಶವಾಗಿ ಬದುಕಬೇಕು. ದಾರ್ಶನಿಕರು ಹಾಕಿಕೊಟ್ಟ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು. ಸಮುದಾಯದ ಯುವಕರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದÀರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ಶೈಲೇಶ್, ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಎಂ.ಎ.ನಾಗರಾಜ್, ಯುವ ವೇದಿಕೆ ಅಧ್ಯಕ್ಷ ಪೃಥ್ವಿ, ಗೌರವಾಧ್ಯಕ್ಷ ಯುವರಾಜ್, ಮಾರುತಿ ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಭಾರತೀಗೌಡ, ಸಂಘದ ಕೇಶವೇಗೌಡ, ಲಕ್ಷ್ಮಿ, ಪುಟ್ಟಸ್ವಾಮಿಗೌಡ, ತಮ್ಮಣ್ಣಗೌಡ ಇನ್ನಿತರರಿದ್ದರು.

Translate »