ಲಾಕ್‍ಡೌನ್ ವೇಳೆಯೂ ತಗ್ಗಲಿಲ್ಲ  ರಸ್ತೆ ಅಪಘಾತ, ಸಾವಿನ ಸಂಖ್ಯೆ
ಮೈಸೂರು

ಲಾಕ್‍ಡೌನ್ ವೇಳೆಯೂ ತಗ್ಗಲಿಲ್ಲ ರಸ್ತೆ ಅಪಘಾತ, ಸಾವಿನ ಸಂಖ್ಯೆ

June 24, 2021

ಮೈಸೂರು, ಜೂ. 23(ಆರ್‍ಕೆ)- ವಾಹನ ಸಂಚಾರ ದಟ್ಟಣೆ ಇಲ್ಲದಿರುವುದರಿಂದ ಲಾಕ್‍ಡೌನ್ ನಿರ್ಬಂಧದ ಅವಧಿಯಲ್ಲಿ ಅಪಘಾತಗಳು ಸಂಭವಿಸುವುದಿಲ್ಲ ಎಂದು ಭಾವಿಸಿದ್ದ ಮೈಸೂರಿನ ಸಂಚಾರ ಪೊಲೀಸರಿಗೆ ಕಳೆದ ಐದೂ ಮುಕ್ಕಾಲು ತಿಂಗಳ ಅಂಕಿ-ಅಂಶ ಆಘಾತ ಉಂಟು ಮಾಡಿದೆ. ಕಳೆದ ಜನವರಿಯಿಂದ ಜೂ.22ರವರೆಗೆ ನಗರದ ರಸ್ತೆಗಳಲ್ಲಿ ಒಟ್ಟು 598 ಅಪಘಾತಗಳಾಗಿದ್ದು, 67 ಮಂದಿ ಜೀವ ಕಳೆದುಕೊಂಡಿದ್ದಾರೆ.
ಲಾಕ್‍ಡೌನ್ ಕಾರಣ ವಾಹನಗಳೇ ಓಡಾಡದಿದ್ದರೆ ಅಪಘಾತಗಳಾಗುವುದಿಲ್ಲ ಎಂಬ ಭಾವನೆ ಜನಸಾಮಾನ್ಯ ರಲ್ಲಿ ಸಹಜ. ಆದರೆ ಲಾಕ್‍ಡೌನ್ ಸಂದರ್ಭ ಮೈಸೂರು ನಗರದಲ್ಲಿ ದಿನಕ್ಕೊಂದರಂತೆ ಅಪಘಾತಗಳು ಸಂಭವಿ ಸಿವೆ. ಅಷ್ಟೇ ಅಲ್ಲದೆ ಸಾವಿನ ಸಂಖ್ಯೆಯೂ ಸಾಮಾನ್ಯ ದಿನಗಳಲ್ಲಿದ್ದಂತೆಯೇ ಇರುವುದು ಕಳವಳಕ್ಕೆ ಕಾರಣ ವಾಗಿದೆ. ಈ ಅವಧಿಯಲ್ಲಿ ದ್ವಿಚಕ್ರವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿರುವುದು ದಾಖಲಾಗಿದೆ.

ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ಅಡ್ಡಾದಿಡ್ಡಿಯಾಗಿ ಹಾಗೂ ಅತಿವೇಗ ಮತ್ತು ಅಜಾಗರೂ ಕತೆ ವಾಹನ ಚಲಾಯಿಸಿರುವುದೇ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಹೆಚ್ಚಾಗಿ ಸಾವಿಗೀಡಾಗಲು ಕಾರಣ ಎಂದು ತಿಳಿದು ಬಂದಿದೆ.
2021ರ ಜನವರಿಯಲ್ಲಿ 57 ಅಪಘಾತಗಳು ಸಂಭವಿಸಿ, 15 ಮಂದಿ ಸಾವನ್ನಪ್ಪಿದ್ದಾರೆ. ಫೆಬ್ರವರಿಯಲ್ಲಿ ಸಂಭವಿಸಿದ 58 ಅಪಘಾತಗಳಲ್ಲಿ 10 ಮಂದಿ, ಮಾರ್ಚ್‍ನಲ್ಲಿ 64 ಅಪ ಘಾತಗಳಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್‍ನಲ್ಲಿ 42 ಅಪಘಾತಗಳಲ್ಲಿ 9 ಮಂದಿ, ಮೇ ತಿಂಗಳಲ್ಲಿ 30 ಅಪಘಾತ ಗಳಲ್ಲಿ 14 ಮಂದಿ ಸಾವನ್ನಪ್ಪಿದರೆ, ಜೂನ್ 22 ರವರೆಗೆ 30 ಅಪಘಾತಗಳಾಗಿ 10 ಮಂದಿ ಸಾವನ್ನಪ್ಪಿದ್ದಾರೆ.

ಲಾಕ್‍ಡೌನ್ ವೇಳೆ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಅತೀ ವೇಗವಾಗಿ ವಾಹನ ಚಲಾ ಯಿಸಿರುವುದು, ಹೆಲ್ಮೆಟ್ ಧರಿಸದಿರುವುದು, ಮೂವರು ಸವಾರಿ ಮಾಡುವುದು, ಮೊಬೈಲ್‍ನಲ್ಲಿ ಮಾತನಾಡಿ ಕೊಂಡು ವಾಹನ ಚಾಲನೆ ಮಾಡುವುದು, ಅತೀ ವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿವೆ. ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ಬ್ರೆತ್ ಅನಲೈಸರಿನಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವುದನ್ನು ಸಂಚಾರ ಪೊಲೀಸರು ಸ್ಥಗಿತಗೊಳಿಸಿರುವುದರಿಂದ ಯುವಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದು ಸಹ ಅಪಘಾತ ಹಾಗೂ ಸಾವು ಹೆಚ್ಚಲು ಪ್ರಮುಖ ಕಾರಣ ಎಂದು ಮೈಸೂರಿನ ಸಂಚಾರ ಪೊಲೀಸರು ವಿಶ್ಲೇಷಿಸಿದ್ದಾರೆ.
ವಾಹನ ಚಾಲಕರು, ಸವಾರರು, ಸಂಚಾರ ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಹಾಗೂ ಪೊಲೀ ಸರು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಲಾಕ್‍ಡೌನ್ ಸಂದರ್ಭದಲ್ಲೂ ಅಪಘಾತಗಳನ್ನು ತಪ್ಪಿಸ ಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Translate »