ಲಾರಿ ಹರಿದು ಮಗು ಸಾವು ತಾಯಿ ಕಣ್ಣು ಮುಂದೆ ಕಂದನ ಧಾರುಣ ಅಂತ್ಯ
ಮೈಸೂರು

ಲಾರಿ ಹರಿದು ಮಗು ಸಾವು ತಾಯಿ ಕಣ್ಣು ಮುಂದೆ ಕಂದನ ಧಾರುಣ ಅಂತ್ಯ

December 30, 2018

ಮೈಸೂರು: ಲಾರಿ ಹರಿದು ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶನಿವಾರ ರಾತ್ರಿ ನಡೆದಿದೆ.

ರಮಾಬಾಯಿ ನಗರದ ರೈಲ್ವೆ ಲೇಔಟ್‍ನ ರವೀಂದ್ರ ಹಾಗೂ ಶೋಭಾ ದಂಪತಿ ಪುತ್ರಿ ಅಂಕಿತ ಮೃತ ಬಾಲಕಿ. ವಿದ್ಯಾರಣ್ಯಪುರಂ 16ನೇ ಕ್ರಾಸ್, ಚಾಮುಂಡಿವನ ರಸ್ತೆಯ ಇಂಟರ್‍ನೆಟ್ ಹಾಗೂ ಜೆರಾಕ್ಸ್ ಅಂಗಡಿಗೆ ತೆರಳಿದ್ದ ಶೋಭಾ ಅವರು ಜೊತೆಯಲ್ಲಿ ತಮ್ಮ ಮಗುವನ್ನೂ ಕರೆದುಕೊಂಡು ಹೋಗಿದ್ದರು. ಅಂಗಡಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು, ರಸ್ತೆ ಬದಿಗೆ ಇಳಿದಿದೆ. ಆ ಸಂದರ್ಭದಲ್ಲಿ ಭೂತಾಳೆ ಮೈದಾನದ ಕಡೆಯಿಂದ ಎಂ ಸ್ಯಾಂಡ್ ತುಂಬಿದ್ದ ಲಾರಿ(ಕೆಎ-05, ಡಿ-4254) ಯಮ ಸ್ವರೂಪಿಯಾಗಿ ಬಂದು, ಮಗುವಿನ ಮೇಲೆ ಹರಿದಿದೆ. ಮಗು ಪಕ್ಕದಲ್ಲೇ ಇದೆ ಎಂದು ತಿಳಿದಿದ್ದ ಶೋಭಾ ಅವರು ಅಪಘಾತದ ಸದ್ದು ಕೇಳಿ ತಿರುಗಿ ನೋಡಿದಾಗ ತನ್ನ ಮಗುವೇ ಲಾರಿ ಚಕ್ರಕ್ಕೆ ಸಿಲುಕಿ ರಕ್ತದ ಮಡುವಿ ನಲ್ಲಿರುವುದನ್ನು ಕಂಡು ಆಘಾತಕೊಳ್ಳಗಾಗಿದ್ದಾರೆ. ಹೆತ್ತ ಮಗು ಕಣ್ಣೆದುರೇ ಅಸುನೀಗಿದ್ದನ್ನು ಕಂಡು ಚೀರಾಡಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವಿನ ಮೃತದೇಹದ ಮುಂದೆ ಹೆತ್ತ ತಾಯಿ ರೋಧಿಸುತ್ತಿರುವುದನ್ನು ಕಂಡ ಜನ ಕಂಬನಿ ಮಿಡಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್.ಸಂಚಾರ ಠಾಣೆ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯ ಶವಾಗಾರದಲ್ಲಿ ಇಂದು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಗುವಿನ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಕೆ.ಆರ್.ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಮಂಜುನಾಥ್ ತಿಳಿಸಿದ್ದಾರೆ.

ಆನ್‍ಲೈನ್‍ನಲ್ಲಿ ಯಾವುದೋ ಅರ್ಜಿ ಹಾಕಲೆಂದು ಹೊರಬಂದಿದ್ದ ಶೋಭಾ ಅವರು ಮಗುವನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು. ಮಗುವನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದರು. ಆದರೆ ವಿಧಿಯಾಟ ಮೀರಲಾಗದು ಎಂಬಂತೆ ಮಗು ರಸ್ತೆ ಬದಿಗೆ ಇಳಿದಿತ್ತು. ಚಾಲಕ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿ ಮುಗ್ಧತೆಯಿಂದ ನೋಡುತ್ತಿದ್ದ ಮಗುವಿನ ಮೇಲೆಯೇ ಲಾರಿ ಹರಿಸಿಬಿಟ್ಟ. ಹೃದಯ ಹಿಂಡುವ ಈ ರೀತಿಯ ದುರ್ಘಟನೆ ಮುಂದೆಂದೂ ನಡೆಯಬಾರದು.

Translate »