- ವೆಂಕಟೇಶ್‍ಪ್ರಸಾದ್ ಮೆಂಟರ್
- ಜೆ.ಸುಚಿತ್ ತಂಡದ ನಾಯಕ
ಮೈಸೂರು: `ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20′ ಏಳನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ತಂಡದ ಫ್ರಾಂಚೈಸಿಯಾಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಸಂಸ್ಥೆ ಬುಧವಾರ ತನ್ನ ತಂಡ ಪ್ರಕಟಿಸಿದೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ವರ್ಣರಂಚಿತ ಕಾರ್ಯಕ್ರಮದಲ್ಲಿ ತಂಡದ 18 ಆಟಗಾರರನ್ನು ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್ ಪರಿಚಯಿಸಿದರು. ಇದೇ ವೇಳೆ ತಂಡದ ನಾಯಕನಾಗಿ ಜೆ.ಸುಚಿತ್ ಹಾಗೂ ಅಂತಾರಾಷ್ಟ್ರೀಯ ಆಟಗಾರ ವೆಂಕಟೇಶ್ ಪ್ರಸಾದ್ ಅವರನ್ನು ತಂಡದ ಮೆಂಟರ್ ಆಗಿ ಪ್ರಕಟಿಸಲಾಯಿತು. ಬಳಿಕ ಮಾತನಾಡಿದ ಅವರು, ತಂಡದಲ್ಲಿನ 18 ಆಟಗಾರರು ಈಗಾಗಲೇ ರಾಜ್ಯದ ವಿವಿಧ ಹಂತಗಳ ಕ್ರಿಕೆಟ್‍ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅನೇಕರು ಸ್ಥಳೀಯ ಪ್ರತಿಭೆಗಳೇ ಆಗಿದ್ದಾರೆ ಎಂದರು.
ಇದಕ್ಕೂ ಮುನ್ನ ತಂಡದ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾತನಾಡಿ, ವಾರಿಯರ್ಸ್ ತಂಡದ ಫ್ರಾಂಚೈಸಿ ಆಗಿರುವುದಕ್ಕೆ ತುಂಬ ಸಂತೋಷವಾಗಿದೆ. 2014ರ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿಯೂ ನಮ್ಮ ತಂಡದಲ್ಲಿ ಅಮಿತ್ ವರ್ಮಾ, ಕೆ.ಗೌತಮ್, ಜೆ.ಸುಚಿತ್, ರಾಜೂ ಭಟ್ಕಳ, ಶೋಯೆಬ್ ಮ್ಯಾನೇಜರ್ ಅವರಂತಹ ಅನುಭವಿ ಆಟಗಾರರಿದ್ದಾರೆ.
ಇವರೊಂದಿಗೆ ಯುವ ಪ್ರತಿಭೆಗಳಿರುವುದರಿಂದ ಈ ಬಾರಿಯೂ ಕಪ್ ಗೆಲ್ಲುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾರಿಯರ್ಸ್ ತಂಡದ ಮೆಂಟರ್, ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾತನಾಡಿ, ಏಳನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಯಶಸ್ಸಿಗೆ ತನ್ನ ಅನುಭವವನ್ನು ಧಾರೆ ಎರೆಯುತ್ತೇನೆ. ಹಲವು ಪ್ರತಿಭಾನ್ವಿತ ಆಟಗಾರರಿರುವ ವಾರಿಯರ್ಸ್ ತಂಡ ಉತ್ತಮ ಪ್ರದರ್ಶನ ನೀಡಲಿದೆ. ಮತ್ತೊಮ್ಮೆ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲಿದೆ ಎಂದು ಹೇಳಿದರು.
ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿರುವ ಜೆ.ಸುಚಿತ್ ಅವರು ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮಥ್ರ್ಯವನ್ನು ಪ್ರದರ್ಶಿಸಿದ್ದಾರೆ. ಇವರ ಸಾರಥ್ಯದಲ್ಲಿ ನಮ್ಮ ತಂಡ ಮುನ್ನಡೆಯುವುದಕ್ಕೆ ಹೆಮ್ಮೆ ಪಡುತ್ತೇವೆ. ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರನ್ನು ನಮ್ಮ ಮೆಂಟರ್ ಆಗಿ ಸೇರಿಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದರು.
ತಂಡದ ತರಬೇತುದಾರ ಆರ್.ಎಕ್ಸ್.ಮುರುಳೀಧರ್ ಮಾತನಾಡಿ, ಈ ಬಾರಿ ನಮ್ಮ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತವಾಗಿದೆ. ಜತೆಗೆ ಅನೇಕ ಹೊಸ ಪ್ರತಿಭಾನ್ವಿತ ಆಟಗಾರರೂ ತಂಡದಲ್ಲಿದ್ದು, ಮೈದಾನದ ಒಳಗೆ ಮತ್ತು ಹೊರಗೆ ಶೇ.100 ಶ್ರಮ ಹಾಕುತ್ತೇವೆ. ಒಟ್ಟಿನಲ್ಲಿ ಈ ಬಾರಿಯೂ ಕಪ್ ಗೆಲ್ಲುವುದು ನಮ್ಮ ಗುರಿ ಎಂದು ತಿಳಿಸಿದರು.
ಪ್ರಾಯೋಜಕರು: ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡಕ್ಕೆ ಮ್ಯಾಕ್ಸ್ವಿಟಾ, ಬಕಾರ್ಡಿ, ಬಾರ್ಬೆಕ್ಯು ನೇಷನ್, ಪಾತಕ್ ಡೆವಲಪರ್ಸ್, ಟೆಕ್ಮಿಲ್, ಕೊಲಂಬಿಯಾ ಏಷ್ಯಾ, ಓಕ್ಲೆ, ಜಿ-ಶಾಕ್, `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಮತ್ತು ಬಿಐಟಿ ಸಂಸ್ಥೆಗಳು ಪ್ರಾಯೋಜಕರಾಗಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೆಎಸ್‍ಸಿಇಯ ಎ.ವಿ.ಶಶಿಧರ್, ಕೆಎಸ್‍ಸಿಇ ಮೈಸೂರು ವಲಯದ ಸಂಚಾಲಕ ಚಾಲಚಂದರ್, ಅಧ್ಯಕ್ಷ ಸುಧಾಕರ್ ರೈ, ಎನ್.ಆರ್.ಗ್ರೂಪ್‍ನ ಆರ್.ಗುರು, ಪವನ್ ರಂಗಾ, ಕಿರಣ್ ರಂಗಾ, ಅನಿರುದ್ಧ್ ರಂಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಾರಿಯರ್ಸ್ ತಂಡದ ಸದಸ್ಯರಿವರು:
ಜೆ.ಸುಚಿತ್, ಅಮಿತ್ ವರ್ಮಾ, ಕೆ.ಗೌತಮ್, ರಾಜೂ ಭಟ್ಕಳ, ಬಿ.ಎನ್.ಭರತ್, ಎಸ್.ಪಿ.ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ.ಸಿದ್ಧಾರ್ಥ್, ಪ್ರತೀಕ್ ಜೈನ್, ವೈಶಾಖ್ ವಿಜಯ್ ಕುಮಾರ್, ಶರತ್ ಶ್ರೀನಿವಾಸ್, ಕೆ.ಎಚ್.ಮನೋಜ್, ಕುಶಾಲ್ ವಾಧ್ವಾನಿ, ಲವ್‍ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರೆ, ಗೌತಮ್ ಸಾಗರ್, ಆರ್.ಎಕ್ಸ್. ಮುರಳಿ (ಹೆಡ್‍ಕೋಚ್), ಶ್ರೀರಂಗ, ಮೋಹನ್ ದಾಸ್(ಫಿಸಿಯೋಥೆರಪಿಸ್ಟ್), ಶ್ಯಾಮ್‍ರಾವ್(ಫಿಟ್‍ನೆಸ್ ಟ್ರೈನರ್), ಎಂ.ಆರ್.ಸುರೇಶ್(ಟೀಮ್ ಮ್ಯಾನೇಜರ್), ಎನ್.ಅರುಣ್‍ಕುಮಾರ್, ಆರ್.ಮಧುಸೂದನ್(ಸಂಯೋಜಕ).
ಸ್ಥಳೀಯ ಆಟಗಾರರು:
ಗೌತಮ್ ಸಾಗರ್, ಜೆ.ಸುಚಿತ್, ಬಿ.ಎನ್.ಭರತ್, ಎಸ್.ಪಿ.ಮಂಜುನಾಥ್, ವೈಶಾಖ್ ವಿಜಯ್‍ಕುಮಾರ್, ಕೆ.ಎಚ್.ಮನೋಜ್,ಕಿಶನ್ ಬೆಡಾರೆ ಈ ಬಾರಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಭರವಸೆ ಮೂಡಿಸಿದ್ದಾರೆ.
ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಗುರುವಾರ ನಡೆದ ವರ್ಣರಂಚಿತ ಕಾರ್ಯಕ್ರಮದಲ್ಲಿ 7ನೇ ಆವೃತ್ತಿಯ ಕೆಪಿಎಲ್ ಟಿ-20 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡವನ್ನು ಸೈಕಲ್ ಪ್ಯೂರ್ ಅಗರಬತ್ತೀಸ್ ಸಂಸ್ಥೆ ಪ್ರಕಟಿಸಿತು.