ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ
ಮೈಸೂರು

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

August 10, 2018

ಮೈಸೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಮೂಲಸೌಕರ್ಯ, ಬೋಧಕರ ನೇಮಕಾತಿ ಮತ್ತು ಉದ್ಯೋಗಾವಕಾಶಗಳಿಗಾಗಿ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಶ್ರಯದಲ್ಲಿ ಗುರುವಾರ ಮೈಸೂರು ವಿವಿ ಮಾನಸಗಂಗೋತ್ರಿ ಕ್ಲಾಕ್ ಟವರ್ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಉನ್ನತ ಶಿಕ್ಷಣದಲ್ಲಿ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮುಖ್ಯವಾಗಿ ಬೋಧಕರ ನೇಮಕಾತಿ ಆಗಬೇಕು. ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಬಲಿಷ್ಠ ಆಧುನಿಕ ರಾಷ್ಟ್ರ ನಿರ್ಮಾಣಕ್ಕೆ ಪಡೆದ ಶಿಕ್ಷಣಕ್ಕೆ ತಕ್ಕ ಸುಭದ್ರ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂಬುದು ಸಂಘಟನೆಯ ಹಕ್ಕೊತ್ತಾಯವಾಗಿದೆ. ನೂರಾರು ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನದಲ್ಲಿ ಸಹಿ ಮಾಡುವ ಮೂಲಕ ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಇಂದು ನಮ್ಮ ದೇಶದ ಶಿಕ್ಷಣ ಪರಿಸ್ಥಿತಿ ಆತಂಕಕಾರಿಯಾಗಿದೆ. ಉನ್ನತ ಶಿಕ್ಷಣದ ಆಶಾಗೋಪುರ ಕುಸಿಯುತ್ತಿದೆ. ಕೇಂದ್ರದ ಹೊಸ ನೀತಿಗಳು, ಸರ್ಕಾರಿ ವಿಶ್ವವಿದ್ಯಾನಿಲಯಗಳಿಗೆ ಮರಣ ಶಾಸನವಾಗಿವೆ. ನೇಮಕಾತಿ ಇಲ್ಲದೆ ಕರ್ನಾಟಕದ ವಿವಿಗಳು ಸೊರಗುತ್ತಿವೆ. ಗುಣಮಟ್ಟದ ಶಿಕ್ಷಣದಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನೆಲೆ ಹಿನ್ನೆಲೆಯ ಸಂಚಾಲಕ ಕೆ.ಆರ್.ಗೋಪಾಲಕೃಷ್ಣ, ಪಂಡಿತಾರಾಧ್ಯ, ಲ.ಜಗನ್ನಾಥ್, ಎಸ್‍ಯುಸಿಐ ಸಂಚಾಲಕ ರವಿ, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಪಿ.ಮಹದೇವಸ್ವಾಮಿ, ಎಸ್.ಗೋಪಾಲ್, ಪ್ರಕಾಶ್, ಸೋಸಲೆ ಮಹೇಶ್ ಇನ್ನಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Translate »