ಎಂಸಿಡಿಸಿಸಿ ಬ್ಯಾಂಕ್‍ಗೆ 6.45 ಕೋಟಿ ಲಾಭ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್‍ಗೆ 6.45 ಕೋಟಿ ಲಾಭ

August 10, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) 2018ರ ಮಾರ್ಚ್ 31ಕ್ಕೆ 6.45 ಕೋಟಿ ತಾತ್ಕಾಲಿಕ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಅವರು, 2017ರ ಮಾರ್ಚ್ 31ಕ್ಕೆ ಬ್ಯಾಂಕ್ 2.79 ಕೋಟಿ ಲಾಭ ಗಳಿಸಿತ್ತು ಎಂದಿದ್ದಾರೆ.

ರಾಜ್ಯ ಸರ್ಕಾರ ಈ ಹಿಂದೆ 50 ಸಾವಿರವರೆಗಿನ ಸಾಲ ಮನ್ನಾ ಘೋಷಿಸಿದಾಗ 68,069 ಸದಸ್ಯರಿಗೆ 275.25 ಕೋಟಿ ರೂ. ಸಾಲ ಮನ್ನಾ ಆಗಿತ್ತು. ಹಾಲಿ ಮುಖ್ಯಮಂತ್ರಿಗಳು ಘೋಷಿಸಿರುವಂತೆ 2 ಲಕ್ಷದವರೆಗಿನ ಸುಸ್ತಿ ಸಾಲ ಹಾಗೂ 1 ಲಕ್ಷದವರೆಗಿನ ಚಾಲ್ತಿ ಸಾಲ ಮನ್ನಾ ಮಾಡಿದರೆ, 65,178 ಸದಸ್ಯರ 457.30 ಕೋಟಿ ರೂ. ಸಾಲ ಮನ್ನಾ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ತಾವು ಅಧ್ಯಕ್ಷರಾಗಿ 2 ವರ್ಷ ಪೂರೈಸಿದ್ದು, ತಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರದ ಯೋಜನೆಯಂತೆ 2017-18ನೇ ಸಾಲಿನಲ್ಲಿ 61,603 ರೈತರಿಗೆ 517.56 ಕೋಟಿ ಅಲ್ಪಾವಧಿ ಬೆಳೆ ಸಾಲ, 1617 ರೈತರಿಗೆ 43.49 ಕೋಟಿ ಮಧ್ಯಮಾವಧಿ ಸಾಲ ಹಾಗೂ ತಂಬಾಕು ಬೆಳೆಗಾರರಿಗೆ 16 ಕೋಟಿ ಸೌದೆ ಸಾಲ ನೀಡಲಾಗಿದೆ.

2018-19ನೇ ಸಾಲಿನಲ್ಲಿ 69,610 ರೈತರಿಗೆ 590 ಕೋಟಿ ಅಲ್ಪಾವಧಿ ಬೆಳೆ ಸಾಲ, 1780 ರೈತರಿಗೆ 50 ಕೋಟಿ ಮಧ್ಯಮಾವಧಿ ಸಾಲ ನೀಡಲು ಉದ್ದೇಶಿಸಿದ್ದು, 2018ರ ಜುಲೈ 31ರವರೆಗೆ 19,419 ರೈತರಿಗೆ 177.07 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಿ ಸಿದ್ದು, ಈ ಪೈಕಿ 10,936 ಹೊಸ ಸದಸ್ಯರಿಗೆ 86.14 ಕೋಟಿ ಸಾಲ ವಿತರಿಸಲಾಗಿದೆ. 686 ರೈತರಿಗೆ 22.82 ಕೋಟಿ ಮಧ್ಯಮಾವಧಿ ಸಾಲ ವಿತರಿಸಲಾಗಿದ್ದು, ಕಳೆದ ಸಾಲಿ ನಲ್ಲಿ 80.30 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿತ್ತು. 2018-19ನೇ ಸಾಲಿನಲ್ಲಿ 144.05 ಕೋಟಿ ಸಾಲ ನೀಡುವ ಗುರಿ ಹೊಂದಿದ್ದು, ಈಗಾಗಲೇ 37.52 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕ್ ಪ್ರಗತಿ ಸಾಧಿಸಿದ್ದು, ಕೃಷಿ ಸಾಲ ಶೇ.93 ಮತ್ತು ಕೃಷಿಯೇತರ ಸಾಲ ಶೇ.96ರಷ್ಟು ವಸೂಲಾತಿ ಆಗಿದೆ ಎಂದಿದ್ದಾರೆ. ತಮ್ಮ 2 ವರ್ಷದ ಅವಧಿಯಲ್ಲಿ 1,06,773 ರೈತರಿಗೆ 881.68 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಿಸಿದ್ದು, ಈ ಪೈಕಿ 20,387 ಹೊಸ ಸದಸ್ಯರಿಗೆ 150.85 ಕೋಟಿ ಸಾಲ ವಿತರಿಸಲಾಗಿದೆ. 2895 ರೈತರಿಗೆ 74.53 ಕೋಟಿ ಮಧ್ಯಮಾವಧಿ ಸಾಲ ವಿತರಿಸಿದ್ದು, ಈ ಪೈಕಿ 262 ರೈತರಿಗೆ 15.80 ಕೋಟಿ ಟ್ರ್ಯಾಕ್ಟರ್ ಮತ್ತು ಟ್ರೈಲರ್‍ಗಾಗಿ, 1356 ರೈತರಿಗೆ 8.24 ಕೋಟಿ ಸೌದೆ ಸಾಲ, 600 ಸ್ವ-ಸಹಾಯ ಗುಂಪುಗಳಿಗೆ 14.73 ಕೋಟಿ, 6 ಸಹಕಾರ ಸಂಘಗಳಿಗೆ 5.30 ಕೋಟಿ ಸೇರಿ ಒಟ್ಟು 1224.84 ಕೋಟಿ ಸಾಲ ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ ಈಗಾಗಲೇ ರೈತರಿಗೆ ರೂಪೇ ಡೆಬಿಟ್ ಕಾರ್ಡ್ ವಿತರಿಸಿದ್ದು, ಪ್ರಧಾನ ಕಚೇರಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ಮಲೆಮಹದೇಶ್ವರ ಬೆಟ್ಟ, ಸಂತೇಮರಳ್ಳಿ ಮತ್ತು ತೆರಕಣಾಂಬಿಯಲ್ಲಿ 2016-17ನೇ ಸಾಲಿನಲ್ಲಿ ನೂತನ ಶಾಖೆಗಳನ್ನು ತೆರೆಯ \ಲಾಗಿದೆ. 2017-18ನೇ ಸಾಲಿನಲ್ಲಿ ಸರ್ಕಾರದಿಂದ ಅನುಮತಿ ದೊರೆತಿರುವ 14 ಶಾಖೆಗಳ ಪೈಕಿ ಮೈಸೂರು ನಗರದಲ್ಲಿ ಜನತಾ ನಗರ, ಸಾತಗಳ್ಳಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸರಗೂರು, ತಲಕಾಡು, ರಾವಂದೂರು, ರಾಮಾಪುರ, ಭೇರ್ಯ, ನಂಜನಗೂಡು ಹಾಗೂ ಹುಲ್ಲಹಳ್ಳಿ ಗ್ರಾಮ ಸೇರಿದಂತೆ 9 ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದು ಚಂದ್ರಶೇಖರ್ ಅವರು ತಿಳಿಸಿದ್ದಾರೆ.

Translate »