ಬದುಕಿಗೂ ನೀತಿ ಸಂಹಿತೆ ಬೇಕೆಂಬುದನ್ನು ಪರಿಚಯಿಸುವ ಕೃತಿ: ಭೈರವಮೂರ್ತಿ ಅಭಿಮತ
ಮೈಸೂರು

ಬದುಕಿಗೂ ನೀತಿ ಸಂಹಿತೆ ಬೇಕೆಂಬುದನ್ನು ಪರಿಚಯಿಸುವ ಕೃತಿ: ಭೈರವಮೂರ್ತಿ ಅಭಿಮತ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ಬದುಕಿಗೂ ನೀತಿ ಸಂಹಿತೆ ಬೇಕು ಎಂಬುದನ್ನು `ಹೊಳೆ ದಂಡೆಯ ತಂಪಿನಲಿ’ ಮತ್ತು `ವಿದ್ಯಮಾನ’ ಕೃತಿಗಳು ಪರಿಚಯಿಸುತ್ತವೆ ಎಂದು ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಲೇಖಕ ಕೊತ್ತಲವಾಡಿ ಶಿವಕುಮಾರ್ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಾಹಿತ್ಯ ನಮಗೆ ದಿಕ್ಸೂಚಿಯಾಗಬೇಕು. ಜೀವನದ ಮೌಲ್ಯಗಳ ನಡುವೆ ಬದುಕನ್ನು ಕಟ್ಟಿಕೊಳ್ಳುವ ಪರಿಯನ್ನು ಪರಿಚಯಿಸಿದ್ದಾರೆ. ಸಮಾಜಮುಖಿ ದೃಷ್ಟಿಕೋನ, ವೈಚಾರಿಕ ನೆಲೆಗಟ್ಟಿನಲ್ಲಿ ಪುಸ್ತಕ ರೂಪುಗೊಂಡಿದೆ. ಬದುಕಿಗೂ ಒಂದು ನೀತಿ ಸಂಹಿತೆ ಬೇಕು ಎಂಬುದನ್ನು ಪುಸ್ತಕದ ಮೂಲಕ ತಿಳಿಸಿದ್ದಾರೆ. ಶ್ರೀಸಾಮಾನ್ಯರ ಮೇಲಿನ ಶೋಷಣೆಗಳನ್ನು ಎತ್ತಿ ಹಿಡಿಯುವ ಜತೆಗೆ ಜಾತಿ ಆಧಾರಿತ ವ್ಯವಸ್ಥೆಯನ್ನು ಪುಸ್ತಕದಲ್ಲಿ ಖಂಡಿಸಿದ್ದಾರೆ. ಎಂದರು.

ಕೃತಿ ಕುರಿತು ಮಾತನಾಡಿದ ಚಿಂತಕ ಡಾ.ಕೆ.ಅನಂತರಾಮು, ‘ಹೊಳೆದಂಡೆ ತಂಪಿನಲಿ’ ಕೃತಿ ವೈವಿಧ್ಯತೆಯಿಂದ ಕೂಡಿದೆ. ಮಾನವೀಯ ಪ್ರೀತಿ ಮರೆಯಾಗುತ್ತಿದೆ. ಆದರೆ ಮನೆಗಳನ್ನು ಕಟ್ಟಿದಂತೆ ಮನಗಳ ಕಟ್ಟುವ ಕಾರ್ಯ ಆಗಲಿಲ್ಲ. ಹೃದಯದ ಭಾವನೆಗಳ ಮೂಲಕ ಮಾನವಾಭಿವೃದ್ಧಿ ಆಗಬೇಕು ಎಂಬುದನ್ನು ಲೇಖಕರು ಬಯಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಾಹಿತಿ ನಂಜನಗೂಡು ಸತ್ಯನಾರಾಯಣ, ಜಗದೀಶ್, ಕೃತಿ ಕತೃ ಕೊತ್ತಲವಾಡಿ ಶಿವಕುಮಾರ್, ಕವಿ ಜಯಪ್ಪ ಹೊನ್ನಾಳಿ, ಕಸಾಪ ಮಾಜಿ ಅಧ್ಯಕ್ಷ ಎಂ.ಚAದ್ರಶೇಖರ್, ಸಾತನೂರು ದೇವರಾಜ್ ಇನ್ನಿತರರು ಉಪಸ್ಥಿತರಿದ್ದರು.

 

Translate »