ಡ್ರಗ್ಸ್ ಕೇಸ್‍ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್ ಆಕ್ರೋಶ
ಮೈಸೂರು

ಡ್ರಗ್ಸ್ ಕೇಸ್‍ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್ ಆಕ್ರೋಶ

September 9, 2020

ಬೆಂಗಳೂರು, ಸೆ.8- ಡ್ರಗ್ಸ್ ಮಾಫಿಯಾದಲ್ಲಿ ಹೆಣ್ಣು ಮಕ್ಕಳು ಮಾತ್ರವೇ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿರುವ ನಟಿ ಪಾರುಲ್ ಯಾದವ್, ಪುರುಷ ಪ್ರಧಾನ ರಾಷ್ಟ್ರದಲ್ಲಿ ಇಂತಹುದೆಲ್ಲವೂ ಸಾಧ್ಯ ಎಂದು ಕಿಡಿಕಾರಿದ್ದಾರೆ.

ಬಾಲಿವುಡ್-ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾದಲ್ಲಿ ಈವರೆಗೂ ನಾಯಕಿ ನಟಿಯರ ಹೆಸರಷ್ಟೇ ಪ್ರಸ್ತಾಪವಾಗಿದೆ. ಈವ ರೆಗೆ ಸ್ಯಾಂಡಲ್‍ವುಡ್ ಹೀರೊಯಿನ್‍ಗಳಾದ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ, ಸುಶಾಂತ್ ಸಿಂಗ್ ರಜಪೂತ್ ಶಂಕಾಸ್ಪದ ಸಾವಿನ ತನಿಖೆಯಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಮಾದಕದ್ರವ್ಯ ವಸ್ತುಗಳ ಖರೀದಿ, ಸಂಗ್ರಹ, ಬಳಕೆ ಆರೋಪದಲ್ಲಿ ಬಂಧಿಸಲಾಗಿದೆ.

ಈ ನಡುವೆ ಜಾಲತಾಣದಲ್ಲಿ ಪುರುಷ ವರ್ಗದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಂಗ ದಲ್ಲಿ ಕೇವಲ ನಟಿಯರು ಮಾತ್ರ ತಪ್ಪು ಮಾಡಿಲ್ಲ. ಅವರೊಂದಿಗೆ ನಟರೂ ಕೈಜೋಡಿಸಿದ್ದಾರೆ. ಅಂತಹವರ ಹೆಸರು ಪೊಲೀಸರಿಗೆ ಗೊತ್ತಿಲ್ಲವೇ? ಕೇವಲ ನಟಿಯರನ್ನೇ ಟಾರ್ಗೆಟ್ ಮಾಡುತ್ತಿದ್ದೀರಾ? ಎಂಬ ಪ್ರಶ್ನೆಗಳು ವೈರಲ್ ಆಗುತ್ತಿವೆ. ಇದಕ್ಕೆ ನಾಯಕಿ ನಟಿ ಪಾರುಲ್ ಯಾದವ್ ಕೂಡ ಧ್ವನಿಗೂಡಿಸಿದ್ದಾರೆ. `ಪುರುಷ ಪ್ರಧಾನ ಸಮಾಜ ಅನ್ನೋದು ಮತ್ತೊಮ್ಮೆ ಸಾಬೀತು ಆಯ್ತು’ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಡ್ರಗ್ಸ್ ಕೇಸ್‍ನಲ್ಲಿ ನಟ-ನಟಿಯರು ಮಾತ್ರ ಇರ್ತಾರಾ? ಉದ್ಯಮಿಗಳು, ಕ್ರೀಡಾಪಟುಗಳು, ರಾಜ ಕಾರಣಿಗಳು ಇಲ್ಲವೇ? ಎಂದು ನಟಿ ಪಾರುಲ್ ಯಾದವ್ ಸರಣಿ ಟ್ವೀಟ್ ಮಾಡಿದ್ದಾರೆ. ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ? ಎಂದು ಪ್ರಶ್ನಿಸಿರುವ ಪಾರುಲ್, ಕೇವಲ ಮೂವರು ನಟಿಯರು ಮಾತ್ರವೇ ಡ್ರಗ್ ಡೀಲ್‍ನಲ್ಲಿ ಇರೋದಾ ಎಂದು ಪ್ರಶ್ನಿಸಿದ್ದಾರೆ.

 

Translate »