ಬೆಂಗಳೂರು, ಸೆ.8- ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಬ್ಬಿರುವ ಮಾದಕ ವಸ್ತು ಜಾಲವನ್ನು ಸದೆಬಡಿಯದೆ ಸುಮ್ಮನಿರುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ಕನ್ನಡ ಚಿತ್ರರಂಗದ ಹಲವರು ಸೇರಿದಂತೆ ಅತಿಗಣ್ಯರ ವಲಯದಲ್ಲಿ ಕಂಪನ ಉಂಟು ಮಾಡಿರುವ ಮಾದಕ ದ್ರವ್ಯ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಯಾರೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಸಮರ್ಪಕ ತನಿಖೆ ನಡೆಸಲಾಗುವುದು. ಡ್ರಗ್ಸ್ ದಂಧೆ ವಿರುದ್ಧ ದೇಶದಲ್ಲಿ ಮೊದಲ ಬಾರಿಗೆ ಬಿಗಿಯಾದ ಕ್ರಮ ತೆಗೆದುಕೊಂಡಿದ್ದೇವೆ. ಡ್ರಗ್ಸ್‍ನಿಂದ ಯುವಕರು, ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.