ಜನರ ಸಂಕಷ್ಟ ನಿವಾರಣೆಗೆ ಮುಂದಾಗದ ಸರ್ಕಾರಗಳ ವಿರುದ್ಧ ರೈತ ನಾಯಕನ ಆಕ್ರೋಶ
ಮೈಸೂರು

ಜನರ ಸಂಕಷ್ಟ ನಿವಾರಣೆಗೆ ಮುಂದಾಗದ ಸರ್ಕಾರಗಳ ವಿರುದ್ಧ ರೈತ ನಾಯಕನ ಆಕ್ರೋಶ

May 1, 2021

ಮೈಸೂರು,ಏ.30-ದೇಶದಲ್ಲಿ ಕೋವಿಡ್ 19 ಕಾಣಿಸಿಕೊಂಡು ಒಂದು ವರ್ಷದ ಮೇಲಾಗಿದ್ದರೂ ಆಮ್ಲಜನಕದ ಕೊರತೆ, ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆ, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಹಾಸಿಗೆಯ ಕೊರತೆ ಹೀಗಾಗಿ ನಾನಾ ಕೊರತೆಗಳಿಂ ದಾಗಿ ದೇಶದಲ್ಲಿ ಸಾವಿರಾರು ಜನರು ಸಾಯುತ್ತಿದ್ದಾರೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಹೊಣೆ ಗೇಡಿತನ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಎನ್.ನಂಜೇಗೌಡ ದೂರಿದ್ದಾರೆ.

ಮೃತಪಟ್ಟ ಜನರ ಶವಸಂಸ್ಕಾರಕ್ಕೂ ಗಂಟೆಗಟ್ಟಲೆ ದಿನಗಟ್ಟಲೆ, ಕಾಯುವ ಸ್ಥಿತಿ ಬಂದಿದ್ದು ಜನರು ಆತಂಕ, ಭಯ ಮತ್ತು ಅಭದ್ರತೆಯ ಜೀವನ ನಡೆಸುವಂತಾಗಿದೆ ಇದಕ್ಕೆಲ್ಲ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನ ವೈಖರಿ, ಚಾಣಾಕ್ಷತನದಿಂದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೌಶಲಗಳನ್ನು ಪ್ರದರ್ಶಿಸುತ್ತಾರೆಯೇ ವಿನಹ ಮಾರಕ ವೈರಸ್ ತಡೆಗೆ ಕ್ರಮ ಕೈಗೊಳ್ಳಲಿಲ್ಲ. ತಮ್ಮ ಅಧಿಕಾರ ಸ್ವಾರ್ಥಕ್ಕಾಗಿ ಕೋವಿಡ್ ನಿಯಮ ಉಲ್ಲಂಘಿಸಿ, ಲಕ್ಷಾಂತರ ಜನರನ್ನು ಸೇರಿಸಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸಭೆ ಮತ್ತು ರ್ಯಾಲಿಗಳನ್ನು ನಡೆಸಿ, ಕೋವಿಡ್ ವ್ಯಾಪಕವಾಗಿ ಹರಡಲು, ಜೊತೆಗೆ ಹಲವರ ಸಾವಿಗೂ ಪರೋಕ್ಷವಾಗಿ ಕಾರಣರಾಗಿದ್ದಾರೆ.

ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂಕೋರ್ಟ್ ಮತ್ತು ಕೆಲವು ಹೈಕೋರ್ಟ್ ಸಹ ಟೀಕಿಸಿದ್ದು, ಇದು ಸರಕಾರದ ಹೊಣೆಗೇಡಿತನ ಮತ್ತು ನಿರ್ಲಕ್ಷತೆಯನ್ನು ತೋರಿಸುತ್ತದೆ. ಪ್ರಧಾನಿಯವರ ಮನದ ಮಾತು ಕೇಳಿದರೆ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬ ಮಾತು ನೆನಪಿಗೆ ಬರುತ್ತದೆ. ಕೇಂದ್ರ ಸರ್ಕಾರದ ಆದೇಶಗಳು ಕೇವಲ ಕಾಗದದಲ್ಲಿ ಇದ್ದರೆ ಸಾಲದು ಅದು ಕಾರ್ಯರೂಪಕ್ಕೆ ಬರಬೇಕು.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರೈತರ ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಕೊರೊನಾದಿಂದಾಗಿ ಅಪಾರ ಸಾವು-ನೋವು ಸಂಭವಿಸುತ್ತಿದ್ದರೂ ಜನರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷತೆ ವಹಿಸಿರುವುದು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇವರಿಗೆ ಅಧಿಕಾರಕ್ಕಾಗಿ ಚುನಾವಣೆ ಮುಖ್ಯವೇ ಹೊರತು ಜನರ ಕ್ಷೇಮವಲ್ಲ ಎಂಬುದು ಸಾಬೀತಾಗಿದೆ ಎಂದು ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »