ಕೊರೊನಾ ಸೋಂಕಿತರಿಗೆ ನೆರವಾಗಲು `ಆರೋಗ್ಯ ಸಹಾಯವಾಣಿ’
ಮೈಸೂರು

ಕೊರೊನಾ ಸೋಂಕಿತರಿಗೆ ನೆರವಾಗಲು `ಆರೋಗ್ಯ ಸಹಾಯವಾಣಿ’

May 1, 2021
  •  ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಾರಂಭ
  • 350 ವೈದ್ಯರಿಂದ ಸೋಂಕಿತರಿಗೆ `ಆನ್‍ಲೈನ್’ ಮಾರ್ಗದರ್ಶನ
  • ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಧ್ರುವನಾರಾಯಣ್ ಸುದ್ದಿಗೋಷ್ಠಿ

ಮೈಸೂರು, ಏ.30(ಎಂಟಿವೈ)- ಕೊರೊನಾ ಸೋಂಕಿತರಿಗೆ ನೆರವಾಗಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮೇ 1ರಿಂದ `ಆರೋಗ್ಯ ಸಹಾಯವಾಣಿ’ ಆರಂಭಿಸುತ್ತಿರುವುದಾಗಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ವರ್ಷ ಕೊರೊನಾ ಕಾಡುತ್ತಿದ್ದ ವೇಳೆ ಕೆಪಿಸಿಸಿ ಆದೇಶದಂತೆ ರಾಜ್ಯಾದ್ಯಂತ `ಆರೋಗ್ಯ ಹಸ್ತ’ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಪಕ್ಷದಿಂದ 6 ಕೋಟಿ ರೂ. ವೆಚ್ಚ ಮಾಡಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಆರೋಗ್ಯ ಕಿಟ್ ವಿತರಿಸಲಾಗಿತ್ತು, ಮನೆ ಮನೆಗೂ ತೆರಳಿ ತಪಾಸಣೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈಗ ಜಿಲ್ಲಾ ಕೇಂದ್ರಗಳ ಕಾಂಗ್ರೆಸ್ ಕಚೇರಿಯಲ್ಲಿ `ಆರೋಗ್ಯ ಸಹಾಯ ವಾಣಿ’ ಆರಂಭಿಸಿ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತದೆ ಎಂದರು.

ಕೆಪಿಸಿಸಿ ವೈದ್ಯರ ಘಟಕದ 350 ವೈದ್ಯರು ಕೊರೊನಾ ಸೋಂಕಿತರಿಗೆ ಆನ್‍ಲೈನ್ ಮೂಲಕ ನೆರವು ನೀಡಲಿದ್ದಾರೆ. ಸೋಂಕಿ ತರಿಗೆ ಕರೆಮಾಡಿ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದು ಆತ್ಮಸ್ಥೈರ್ಯ ತುಂಬ ಲಾಗುತ್ತದೆ. ಅವರ ಸ್ಥಿತಿ ತೀವ್ರಗೊಂಡಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವ, ಆಕ್ಸಿಜನ್ ವ್ಯವಸ್ಥೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನೂ ಸಹಾಯ ವಾಣಿ ಮಾಡಲಿದೆ ಎಂದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿನ ಆರೋಗ್ಯ ಸಹಾಯವಾಣಿ ಮೇ 1ರ ಬೆಳಿಗ್ಗೆ 11ಕ್ಕೆ ಕಾರ್ಯಾರಂಭ ಮಾಡಲಿದೆ. ಮಧ್ಯಾಹ್ನ ನಂತರ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ಸಹಾಯವಾಣಿ ಉದ್ಘಾಟನೆಗೊಳ್ಳಲಿದೆ ಎಂದು ಮಾಜಿ ಸಂಸದ ಧ್ರುವನಾರಾಯಣ ತಿಳಿಸಿದರು.

Translate »