ವೈದ್ಯನಾಗುವ ಕನಸು ಕಂಡ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಂಟಕಪ್ರಾಯವಾದ ‘ನೀಟ್’
ಮೈಸೂರು

ವೈದ್ಯನಾಗುವ ಕನಸು ಕಂಡ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಂಟಕಪ್ರಾಯವಾದ ‘ನೀಟ್’

June 6, 2019

ಬೆಂಗಳೂರು: ವೈದ್ಯರಾಗುವ ಕನಸು ಕಂಡಿದ್ದ ಗ್ರಾಮೀಣ, ಪ್ರತಿಭಾ ವಂತ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೇಂದ್ರದ ನೀಟ್ ಪರೀಕ್ಷೆ ಮಾರಕವಾಗಿ ಪರಿಣಮಿಸಿದೆ.

ಈ ವಿದ್ಯಾರ್ಥಿಗಳ ಹಿತದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುತ್ತಿರುವುದಲ್ಲದೆ, ಖಾಸಗಿ ಶಿಕ್ಷಣ ಮಂಡಳಿ ಯಿಂದಲೂ ಶೇ. 40 ರಷ್ಟು ಸೀಟು ಪಡೆದು, ಸಿಇಟಿ ಮೂಲಕ ಇವರಿಗೆ ಮೀಸಲಿರಿಸಿತ್ತು. ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಎಲ್ಲಾ ವೈದ್ಯಕೀಯ

ಕಾಲೇಜುಗಳಿಂದ 15 ರಿಂದ 16 ಸಾವಿರ ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಅದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಲ್ಲವೇ ಸರ್ಕಾರ ನಿಗದಿಪಡಿಸಿದ ಶುಲ್ಕದಿಂದ 2360 ಸೀಟುಗಳು ಲಭ್ಯವಾಗುತ್ತಿದ್ದವು. ಆದರೆ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ನಮ್ಮವರು ಮೊದಲ ರ್ಯಾಂಕ್‍ಗಳನ್ನು ಪಡೆದರಷ್ಟೇ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತದೆ. ಇಲ್ಲದಿದ್ದರೆ ಬಿಹಾರ್, ರಾಜಸ್ತಾನ್, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿನ ವೈದ್ಯ ಕೀಯ ಕಾಲೇಜುಗಳಲ್ಲಿ ಪ್ರವೇಶ ಲಭ್ಯವಾಗಲಿದೆ. ರಾಜ್ಯದ ವಿದ್ಯಾರ್ಥಿಗಳು ಹೊರ ರಾಜ್ಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಧೈರ್ಯ ತೋರುತ್ತಿಲ್ಲ. ಮತ್ತು ದೂರದ ಊರುಗಳಲ್ಲಿ ಉಳಿದು, ತಗಲುವ ವೆಚ್ಚ ಭರಿಸಲು ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳಿಗೆ ಸಾಧ್ಯವಾಗದೇ ಕಳೆದ ಸಾಲಿನಲ್ಲಿ ಪ್ರವೇಶ ನಿರಾಕರಿಸಿದ್ದಾರೆ.

ಆದರೆ ಹೊರ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಬಂದು ವ್ಯಾಸಂಗ ಮಾಡಲು ಉತ್ಸುಕರಾಗಿದ್ದಾರೆ, ಜೊತೆಗೆ ಎಲ್ಲಾ ಸೀಟುಗಳು ಇಲ್ಲಿ ಭರ್ತಿಯಾಗಿವೆ. ಕೇಂದ್ರ ಈ ನಿರ್ಧಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ಸೀಟುಗಳು ಲಭ್ಯವಾಗದೇ ಕೇವಲ ಶೇ. 5 ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ.

ತಮ್ಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ನೀಟ್ ಪರೀಕ್ಷೆ ನಿರಾಕರಿಸಿ, ಅಲ್ಲಿನ ಸರ್ಕಾರಗಳು ಸುಗ್ರಿವಾಜ್ಞೆ ಇಲ್ಲವೆ ಕಾನೂನು ತಂದು ತಮ್ಮ ಸೀಟುಗಳು ತಮ್ಮ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಿದ್ದಾರೆ.

ಆದರೆ ಕರ್ನಾಟಕ ಸರ್ಕಾರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಆ ಇಲಾಖೆ ಸಚಿವರಾ ಗಿರುವ ತುಕಾರಾಂ ಅವರಿಗೆ ಇಲಾಖೆಯ ಪರಿಜ್ಞಾನವೇ ಇದ್ದಂತಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಕಾನೂನು ತರುವ ಕಡತ ಸಿದ್ಧಗೊಂಡಿದೆ. ಅದನ್ನು ಸುಗ್ರೀವಾಜ್ಞೆ ಮೂಲಕವೋ ಇಲ್ಲವೆ ಅಧಿವೇಶನದಲ್ಲಿ ಮಂಡಿಸಿ, ಕಾನೂನು ತರುವ ಬಗ್ಗೆ ಸಚಿವರು ಇನ್ನು ಮೀನಾಮೇಷ ಎಣಿಸುತ್ತಿದ್ದಾರೆ.

ಅಧಿಕಾರಿಗಳು ತಂದಿರುವ ಕಾನೂನಿನ ಪ್ರಕಾರ ಖಾಸಗಿ, ಧಾರ್ಮಿಕ, ಅಲ್ಪಸಂಖ್ಯಾತ, ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳು ಹಾಗೂ ಸ್ವಾಯತ್ತ ಮೆಡಿಕಲ್ ಕಾಲೇಜುಗಳಲ್ಲಿ ಶೇಕಡಾ ಐವತ್ತರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂಬುದು ನೂತನ ಕಾಯ್ದೆಯ ಸಾರಾಂಶ. ಈ ಬಗ್ಗೆ ಖಾಸಗಿ ವೈದ್ಯಕೀಯ ಮಂಡಳಿಗಳ ಸಭೆಯನ್ನು ಈ ವಾರ ಕರೆಯುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದಾರೆ. ಏನೇ ಆದರೂ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಸರ್ಕಾರಿ ಆದೇಶ ಬಂದರೆ ನಮ್ಮ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ನಮ್ಮ ವೈದ್ಯಕೀಯ ಸೀಟುಗಳು ನಮ್ಮವರಿಗೇ ಲಭ್ಯವಾಗಲಿದೆ. ಇಲ್ಲವೆ ಪರರಾಜ್ಯ ವಿದ್ಯಾರ್ಥಿಗಳ ಪಾಲಾಗಲಿದೆ.

ವೈದ್ಯಕೀಯ ಕೋರ್ಸುಗಳ ಸೀಟುಗಳ ಹಂಚಿಕೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಮೆಡಿಕಲ್ ವ್ಯಾಸಂಗ ಮಾಡುವುದು ಕಷ್ಟವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬಹುತೇಕ ಶಿಕ್ಷಣ ಸಂಸ್ಥೆಗಳು ಹಣದ ಆಸೆಗಾಗಿ ಪರ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳನ್ನು ಒದಗಿಸುತ್ತಿದ್ದು ರಾಜ್ಯದ ಭೂಮಿ, ನೀರು, ವಿದ್ಯುತ್ ಮತ್ತಿತರ ಸವಲತ್ತು ಪಡೆದು ಪರ ರಾಜ್ಯದವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರಕ್ಕೆ ಇರಿಸು ಮುರಿಸು ಉಂಟು ಮಾಡುತ್ತಿದೆ.

Translate »