ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು
ಮೈಸೂರು

ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು

May 6, 2019

ಮೈಸೂರು: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ `ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)’ ಭಾನುವಾರ ಮೈಸೂರಿನ 29 ಕೇಂದ್ರಗಳಲ್ಲಿ ನಡೆಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಹೆಚ್ ಆರ್‍ಡಿ) ಸ್ಥಾಪಿಸಿರುವ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‍ಟಿಎ) ನೀಟ್ ಪರೀಕ್ಷೆ ನಡೆಸುವ ಹೊಣೆ ಹೊಂದಿದ್ದು, ಮೈಸೂರಿನ 29 ಕೇಂದ್ರಗಳಿಂದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ.
ದೇಶದ 100ಕ್ಕೂ ಹೆಚ್ಚು ನಗರಗಳು ಸೇರಿದಂತೆ ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ, ಕಲ್ಬುರ್ಗಿ, ಹುಬ್ಬಳ್ಳಿ, ಮಂಗಳೂರು ಹಾಗೂ ಉಡುಪಿ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ನಡೆಯಿತು. ಅದೇ ರೀತಿ ಮೈಸೂರಿನ ಕೇಂದ್ರಗಳಲ್ಲಿ ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಇಂದು ಮಧ್ಯಾಹ್ನ 2ರಿಂದ 5ರವರೆಗೆ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಲು 2018ರ ನ.1ರಿಂದ ನ.30 ರವರೆಗೆ ಅವಕಾಶ ನೀಡಲಾಗಿತ್ತು. ಇದೇ ಏ.15ರಿಂದ ವೆಬ್‍ಸೈಟ್ ಮೂಲಕ ಪರೀಕ್ಷಾ ಪ್ರವೇಶ ಪತ್ರ ತೆಗೆದುಕೊಳ್ಳಬಹುದಿತ್ತು. ಇಂದು ನಡೆದ ಪರೀಕ್ಷೆಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆಯಲು ಮಧ್ಯಾಹ್ನ 1.30ರವರೆಗೆ ಕಾಲಾವಕಾಶ ನಿಡಲಾಗಿತ್ತು.

ಭೌತಶಾಸ್ತ್ರ (180 ಅಂಕ), ರಸಾಯನಶಾಸ್ತ್ರ (180 ಅಂಕ) ಹಾಗೂ ಜೀವಶಾಸ್ತ್ರ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ, 360 ಅಂಕಗಳು) ವಿಷಯಗಳು ಸೇರಿದಂತೆ ಒಟ್ಟು 180 ಪ್ರಶ್ನೆಗಳಿಗೆ ಒಟ್ಟು 720 ಅಂಕಗಳನ್ನು ನಿಗದಿ ಮಾಡಲಾಗಿತ್ತು. ಜೂ.5ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಕಲು ತಡೆದು ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಸಂಬಂಧ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಮೊಬೈಲ್, ಮೈಕ್ರೋಫೋನ್, ಜಾಮೆಟ್ರಿ ಬಾಕ್ಸ್, ಹ್ಯಾಂಡ್ ಬ್ಯಾಗ್, ಪರ್ಸ್, ಕ್ಯಾಲ್ಕುಲೇಟರ್, ಕೈಗಡಿಯಾರ ಸೇರಿದಂತೆ ಹಲವು ವಸ್ತುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿತ್ತು. ಅರ್ಧ ತೋಳಿನ ಟಾಪ್ ಅಥವಾ ಅಂಗಿ ಸೇರಿದಂತೆ ಸಾಧಾರಣ ಉಡುಪು ಗಳನ್ನು ಧರಿಸಿ ಕೇಂದ್ರಕ್ಕೆ ಬರಲು ನಿರ್ದೇಶನ ನೀಡಲಾಗಿತ್ತು. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಸರ್ಕಾರದಿಂದ ನೀಡಿರುವ ಯಾವುದೇ ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಬೇಕಿತ್ತು. ಮೈಸೂರಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗೆ ಸಂಬಂಧಿಸಿದಂತೆ ಮಾಹಿತಿಗಾಗಿ `ಮೈಸೂರು ಮಿತ್ರ’ ಮೈಸೂರು ನೀಟ್ ಪರೀಕ್ಷೆ ನಗರ ಸಂಯೋಜಕಿ ಲತಾ ಅವರನ್ನು ಸಂಪರ್ಕಿಸಿತ್ತು. ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದಂತೆ ಎನ್‍ಟಿಎ ನಿರ್ದೇಶನ ನೀಡಿದೆ ಎಂದು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

Translate »