ಮೈಸೂರು, ಮಾ.11(ಆರ್‍ಕೆಬಿ)- ಕವಿ ಏಕಾಗ್ರತೆಯಿಂದ ಕವಿತೆ ಸೃಷ್ಟಿಸಿರುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿನ ಓದಿನ, ಆಸಕ್ತಿಯ ಕೊರತೆ ಅಡ್ಡಿಯಾಗುತ್ತದೆ ಎಂದು ವಿಮರ್ಶಕ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯ ಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ `ಪ್ರಾಯೋಗಿಕ ವಿಮರ್ಶೆ’ ಕಾರ್ಯಾ ಗಾರಕ್ಕೆ ಬುಧವಾರ ಚಾಲನೆ ನೀಡಿದ ಅವರು, ಕವಿತೆಯನ್ನು ನಾವು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಆಳವಾದ ಅಭ್ಯಾಸ ನಡೆಸಿ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುವ ರೀತಿಯೇ ಕವಿತೆಯನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ತರಬೇತಿ ಅವಶ್ಯ. ಪ್ರತಿಪದದ ತರ್ಕಬದ್ಧ ಅರ್ಥ ಗ್ರಹಿಕೆ, ಕವಿತೆಯ ಸಾರಾಂಶ, ವಿಮರ್ಶೆ ಮೊದಲಾದವನ್ನು ಗ್ರಹಿಸುವ ಶಕ್ತಿಯನ್ನು ತರಬೇತಿ ಮೂಲಕ ಪಡೆಯಬೇಕು ಎಂದು ತಿಳಿಸಿದರು.
ಭಾವನಾತ್ಮಕ ಮನಸ್ಥಿತಿಯವರಿಗೆ ಕವಿತೆಗಳ ಸಾಲು ಮನಮುಟ್ಟು ತ್ತದೆ. ಅಪಕ್ವತೆ, ಲೋಕಾನುಭವ ಕೊರತೆ, ಭಾವನಾತ್ಮಕ ಬೆಳವಣಿಗೆ ಇಲ್ಲದೇ ಇರುವರಿಗೆ ಕವಿತೆ, ವಿಮರ್ಶೆ, ಕಾದಂಬರಿಗಳ ಪದ ಪುಂಜ ಗ್ರಹಿಕೆ ಕಷ್ಟ. ಕವಿ-ಓದುಗನ ಮನಸ್ಥಿತಿ ಒಂದೇ ರೀತಿ ಇಲ್ಲದಿದ್ದರೆ ಕಾವ್ಯದ ವಸ್ತು ಪಠ್ಯಕ್ಕಷ್ಟೇ ಸೀಮಿತಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತಿಮ ಬಿಎ ಐಚ್ಛಿಕ ಕನ್ನಡ ಮತ್ತು ಎಂಎ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಹಲವು ಪ್ರಬಂಧಗಳನ್ನು ಮಂಡಿಸಿ ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್, ಪ್ರಾಂಶುಪಾಲ ವಿಜಯ್, ಕನ್ನಡ ವಿಭಾಗದ ಪ್ರಾಧ್ಯಾ ಪಕ ಪ್ರೊ.ಎಂ.ನಂಜುಂಡಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ, ಸಂಯೋಜಕಿ ಕಲಾಶ್ರೀ ಉಪಸ್ಥಿತರಿದ್ದರು.