ಮೈಸೂರು, ಮಾ.11(ಆರ್‍ಕೆಬಿ)- ಮಹಿಳೆಯರು ನ್ಯಾಯಕ್ಕಾಗಿ ಅಲೆವ ಸ್ಥಿತಿ, ಅಸಮಾ ನತೆ, ಹೆಣ್ಣು ಭ್ರೂಣ ಹತ್ಯೆ ಘಟನೆಗಳು ಮಹಿಳೆಯರಿಗಿನ್ನೂ ಸೂಕ್ತ ಗೌರವ, ಸ್ಥಾನಮಾನ ದೊರೆತಿಲ್ಲ ಎಂಬುದನ್ನು ತಿಳಿಸುತ್ತವೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯಲ್ಲಿ ಮಾತನಾಡಿ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ, ಕೊಲೆ ಪ್ರಕರಣ ನಿರಂತರವಾಗಿವೆ. ಎಲ್ಲಿದೆ ಮಹಿಳೆಯರ ಸಬಲೀಕರಣ? ಎಂದು ಪ್ರಶ್ನಿಸಿದರು.
ನ್ಯಾಯಾಂಗ ವ್ಯವಸ್ಥೆ ಬದಲಾಗದೇ ಮಹಿಳೆಯರ ರಕ್ಷಣೆ ಅಸಾಧ್ಯ. ಪುರುಷರೂ ಸೇರಿ ಮಹಿಳಾ ದಿನ ಆಚರಿಸಬೇಕು, ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ ಬಗ್ಗೆ ಚರ್ಚೆಯಾಗಬೇಕು. ಸಮಾನವಾಗಿ ಬದುಕೋಣ ಎಂಬ ಸಂದೇಶ ನೀಡಿದರೆ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಕ್ಕಂತೆ ಎಂದರು.
ಮಹಿಳೆಗೆ ಮನೆಯಲ್ಲಿ ಮೊದಲು ಗೌರವ ಸಿಕ್ಕರೆ ಸಮಾಜದಲ್ಲೂ ದೊರೆಯುತ್ತದೆ. ಮನೆಯಲ್ಲಿ ಗಂಡು ಮಕ್ಕಳಿಗೂ ಸಂಸ್ಕಾರ ತಿಳಿಸಿಕೊಡಬೇಕು. ಗಂಡು, ಹೆಣ್ಣೆಂಬ ಭೇದ ಸಲ್ಲ. ಮಹಿಳೆಯರಿಗೆ ಶಿಕ್ಷಣವೇ ಅಸ್ತ್ರ. ಮಹಿಳೆ ಶಿಕ್ಷಿತಳಾದರೆ ಯಾರ ಹಂಗಿಗೂ ಒಳಗಾಗದೆ ಜೀವನ ರೂಪಿಸಿಕೊಳ್ಳಬಲ್ಲಳು ಎಂದರು.
ಇದೇ ಸಂದರ್ಭ 10 ಮಹಿಳೆಯರಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತೆಯರೂ ಆದ ಸಾಧಕಿಯರಾದ ಸುಶೀಲಾ, ರಾಜೇಶ್ವರಿ, ರಾಣಿ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಜಿಪಂ ಮಾಜಿ ಅಧ್ಯಕ್ಷೆ ಸುಶೀಲಾ ಕೇಶವಮೂರ್ತಿ, ಮಾಜಿ ಮೇಯರ್ ಮೋದಾಮಣಿ, ಮಾಜಿ ಜಿಲ್ಲಾಧ್ಯಕ್ಷೆ ಶಶಿರೇಖಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.