ಮೈಸೂರು ತಾಲೂಕಿನ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಹದ್ದುಬಸ್ತು ಆಂದೋಲನ ಆರಂಭ
ಮೈಸೂರು

ಮೈಸೂರು ತಾಲೂಕಿನ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಹದ್ದುಬಸ್ತು ಆಂದೋಲನ ಆರಂಭ

March 12, 2020

ಮೈಸೂರು,ಮಾ.11(ಆರ್‍ಕೆ)- ಮೈಸೂರು ತಾಲೂಕಿನ 15 ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳನ್ನು ಅಳತೆ ಮಾಡಿ ಹದ್ದುಬಸ್ತು ಗಡಿ ಗುರುತಿಸುವ ಆಂದೋಲನ ಇಂದು ಆರಂಭ ವಾಯಿತು. ತಹಸೀಲ್ದಾರ್ ರಕ್ಷಿತ್ ತುರ್ತು ಜ್ಞಾಪನ ನೀಡಿದ ಹಿನ್ನೆಲೆ ಯಲ್ಲಿ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್‍ಪೆಕ್ಟರ್, ವಿಲೇಜ್ ಅಕೌಂಟೆಂಟ್ ಹಾಗೂ ಸರ್ವೆಯರ್‍ಗಳು ಇಂದು ಜಂಟಿಯಾಗಿ ಅಳತೆ ಮಾಡಿ ಸರ್ಕಾರಿ ಜಮೀನು, ಕೆರೆ, ಕಟ್ಟೆ, ಓಣಿ, ಸ್ಮಶಾನ, ಶಾಲಾ ಪ್ರದೇಶ, ರಸ್ತೆಗಳ ಹದ್ದುಬಸ್ತು ಗಡಿ ಗುರುತಿಸಿ ಕಲ್ಲು ನೆಟ್ಟರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಧನಗಳ್ಳಿ, ಮಾವಿನಹಳ್ಳಿ, ಚಿಕ್ಕಕಾನ್ಯ, ಅಣಗಳ್ಳಿ, ಉದ್ಬೂರು, ಕುಪ್ಪೇಗಾಲ, ಕೀರಾಳು, ವರಕೋಡು, ವಾಜಮಂಗಲ, ಭುಗತಗಳ್ಳಿ, ಜಟ್ಟಿಹುಂಡಿ, ಇಲವಾಲ, ಕಲ್ಲೂರು ನಾಗನಹಳ್ಳಿ, ನಾಗವಾಲ ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಿದರು. ಈ ವೇಳೆ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದ ಸರ್ಕಾರಿ ಜಮೀನುಗಳನ್ನು ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು. ಆಯಾ ಗ್ರಾಮಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ತೆರವು ಕಾರ್ಯಕ್ಕೆ ಬೆಂಬಲ ನೀಡಿದರು.

ತಿಂಗಳಿಗೊಂದು ದಿನ ಹದ್ದುಬಸ್ತು ಆಂದೋಲನ ಮಾಡಿ ಒತ್ತುವರಿ ಮಾಡಿ ಕೊಂಡಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸುವಂತೆ ಶಾಸಕ ಜಿ.ಟಿ. ದೇವೇಗೌಡರು ತಾಲೂಕು ಪಂಚಾಯ್ತಿ ಕೆಡಿಪಿ ಸಭೆಯಲಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಪ್ರಥಮ ಹದ್ದುಬಸ್ತು ಆಂದೋಲನವನ್ನು ಮಾಡಲಾಯಿತು.

Translate »