ಮೈಸೂರು ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ `ಸಿಮ್ಯುಲೇಶನ್ ಕೇಂದ್ರ’ ಮಾ.14ಕ್ಕೆ ಉದ್ಘಾಟನೆ
ಮೈಸೂರು

ಮೈಸೂರು ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ `ಸಿಮ್ಯುಲೇಶನ್ ಕೇಂದ್ರ’ ಮಾ.14ಕ್ಕೆ ಉದ್ಘಾಟನೆ

March 12, 2020

ಮೈಸೂರು, ಮಾ.11(ಪಿಎಂ)- ವೈದ್ಯ ಕೀಯ ಶಿಕ್ಷಣದಲ್ಲಿ ಪರಿಣಾಮಕಾರಿ ಪ್ರಾಯೋ ಗಿಕ ಕಲಿಕೆಗೆ ನೆರವಾಗುವ `ವೈದ್ಯಕೀಯ ಸ್ಕಿಲ್ ಅಂಡ್ ಸಿಮ್ಯುಲೇಶನ್ ಸೆಂಟರ್’ ಅನ್ನು ಮೈಸೂರಿನ ಎಂಜಿ ರಸ್ತೆಯ ಹಳೇ ಜೆಎಸ್‍ಎಸ್ ಆಸ್ಪತ್ರೆಯ 3ನೇ ಅಂತಸ್ತಿನಲ್ಲಿ ಸ್ಥಾಪಿಸ ಲಾಗಿದೆ. ಇದಕ್ಕಾಗಿ ಕಟ್ಟಡ ಹೊರತಾಗಿ 22 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಗೆ ಹಾಗೂ ವೃತ್ತಿಪರರ ಜ್ಞಾನ ವಿಸ್ತರಣೆಗೆ ಅನು ಕೂಲವಾಗಲೆಂದು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ 12 ಸಾವಿರ ಚದರಡಿಯ ವಿಸ್ತೀರ್ಣದಲ್ಲಿ ಅತ್ಯಾಧುನಿಕ ವ್ಯವಸ್ಥೆ ಯನ್ನು ಮಾಡಲಾಗಿದೆ.

ಸಿಮ್ಯುಲೇಶನ್ ಸೆಂಟರ್‍ನಲ್ಲಿಯೇ ಬುಧ ವಾರ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಹೆಚ್.ಬಸವನಗೌಡಪ್ಪ, `ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ದೇಶದ ಎಲ್ಲಾ ವೈದ್ಯಕೀಯ ಕಾಲೇಜಿನಲ್ಲಿಯೂ ಕನಿಷ್ಠ ಪ್ರಮಾಣದಲ್ಲಾ ದರೂ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರಬೇಕು ಎಂಬುದನ್ನು ಕಡ್ಡಾಯ ಗೊಳಿಸಿದೆ. ಅಧಿಕ ಪ್ರಮಾಣದ ಅಂತಾ ರಾಷ್ಟ್ರೀಯ ಗುಣಮಟ್ಟದ `ಸ್ಕಿಲ್ ಅಂಡ್ ಸಿಮ್ಯುಲೇಶನ್ ಸೆಂಟರ್’ ನಮ್ಮಲ್ಲಿ ಸದ್ಯವೇ ಕಾರ್ಯಾರಂಭ ಮಾಡಲಿದೆ ಎಂದರು.

ಕಾಯಿಲೆಗಳ ಅಧ್ಯಯನಕ್ಕೆ ಅಣಕು ಮಾದರಿ ಯಾಂತ್ರಿಕ ವ್ಯವಸ್ಥೆ ಇದರಲ್ಲಿರಲಿದ್ದು, ವೈದ್ಯ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಇದು ಬಹಳ ಪರಿಣಾಮಕಾರಿಯಾಗಿರ ಲಿದೆ. ಚಿಕಿತ್ಸೆ ವಿಧಾನ ತಪ್ಪಾದರೆ ಯಂತ್ರವೇ ತಪ್ಪನ್ನು ಎತ್ತಿ ತೋರಿಸುತ್ತದೆ. ನಮ್ಮ ಕಾಲೇ ಜಿನ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ತರ ಬೇತಿ ನೀಡಲಾಗುತ್ತದೆ. ಇತರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೂ ತರಬೇತಿ ಪಡೆಯಲು ಅವ ಕಾಶವಿದ್ದು, ನಿರ್ವಹಣೆ ದೃಷ್ಟಿಯಿಂದ ಶುಲ್ಕ ವಿಧಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ತರಬೇತಿದಾರರು ಇಲ್ಲಿ ತರಬೇತಿ ನೀಡಲಿದ್ದಾರೆ. ನಮ್ಮಲ್ಲಿಯೂ ಈ ಬಗ್ಗೆ ತಿಳಿದಿರುವ 10 ಮಂದಿ ತರಬೇತುದಾರರಿ ದ್ದಾರೆ ಎಂದು ವಿವರಿಸಿದರು.

ವಿವಿಧ ರೋಗ ಲಕ್ಷಣಗಳ ಕೃತಕ ವ್ಯವಸ್ಥೆ ಇಲ್ಲಿರಲಿದ್ದು, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸಲಿದೆ. ಮಾನವನ ಆಕೃ ತಿಯ ಬೊಂಬೆಗಳು ನಾನಾ ರೋಗಗಳಿಂದ ಬಳಲುವ ಮಾದರಿಯಲ್ಲಿ ಕೃತಕ ವ್ಯವಸ್ಥೆ ಅಳವಡಿಸಲಾಗಿರುತ್ತದೆ. ತುರ್ತು ಚಿಕಿತ್ಸಾ ಘಟಕ, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಹಲವು ಆಸ್ಪತ್ರೆಯ ವ್ಯವಸ್ಥೆ ಇಲ್ಲಿ ರೋಗಿ ಒಳಗೊಂ ಡಂತೆ ಕೃತಕವಾಗಿ ಇರಲಿದೆ ಎಂದರು.

ಸಿಮ್ಯುಲೇಶನ್ ಸೆಂಟರ್‍ನ ಸಂಯೋ ಜಕಿ ಡಾ.ಎಸ್.ಅರ್ಚನಾ ಮಾತನಾಡಿ, ಪ್ರಪಂಚದ ಆರೋಗ್ಯ ಕ್ಷೇತ್ರದಲ್ಲಿ 10 ವರ್ಷ ಗಳಿಂದ ಸಿಮ್ಯುಲೇಶನ್ ಲ್ಯಾಬ್ ವ್ಯವಸ್ಥೆ ಹೆಚ್ಚು ಮುನ್ನಲೆಗೆ ಬರುತ್ತಿದೆ. ಸೇನೆಯಲ್ಲಿ ವೃತ್ತಿ ಸ್ವರೂಪಕ್ಕೆ ಅನುಗುಣವಾಗಿ ಸಿಮ್ಯು ಲೇಶನ್ ಮಾದರಿ ಬಳಸಿಕೊಳ್ಳುವುದು ಹಿಂದಿ ನಿಂದಲೂ ಇದೆ. ಅದೇ ರೀತಿ ಆರೋಗ್ಯ ಕ್ಷೇತ್ರದ ವೃತ್ತಿಪರತೆ, ಕೌಶಲ ವೃದ್ಧಿಸಿ ಕೊಳ್ಳಲೂ ಈ ವ್ಯವಸ್ಥೆ ಪ್ರಯೋಜನಕಾರಿ ಯಾಗಿದೆ. ನೇರ ರೋಗಿಯನ್ನೇ ಬಳಸಿ ಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಾಗ ಕೆಲ ದುಷ್ಪರಿಣಾ ಮಗಳಾಗುತ್ತವೆ. ಅವನ್ನು ತಡೆಗಟ್ಟಲು ಸಿಮ್ಯುಲೇಷನ್ ಸಹಕಾರಿ ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ ಸೂರಮಠ್ ಮಾತನಾಡಿ, ಮಾ.14ರ ಬೆಳಿಗ್ಗೆ 10.30ಕ್ಕೆ `ಸ್ಕಿಲ್ ಅಂಡ್ ಸಿಮ್ಯುಲೇಶನ್ ಸೆಂಟರ್’ ಉದ್ಘಾಟನೆ ನಡೆಯಲಿದೆ. ಬಳಿಕ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮೆಡಿ ಕಲ್ ಕೌನ್ಸಿಲ್ ಆಫ್ ಇಂಡಿಯಾದ ಮಹಾ ಕಾರ್ಯದರ್ಶಿ ಡಾ.ರಾಕೇಶ್‍ಕುಮಾರ್ ವತ್ಸ್ ಅವರು ನೂತನ ಕೇಂದ್ರ ಉದ್ಘಾ ಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆ ವಹಿಸುವರು. ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದ್ರ ಸಿಂಗ್ ಉಪಸ್ಥಿತರಿರುವರು ಎಂದರು.ಜೆಎಸ್‍ಎಸ್ ಅಕಾಡೆಮಿಯ ಕುಲ ಸಚಿವ ಡಾ.ಬಿ.ಮಂಜುನಾಥ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಾಳೆ ಜೆಎಸ್‍ಎಸ್ ವೈದ್ಯ ಕಾಲೇಜಿನಲ್ಲಿ 202 ಮಂದಿಗೆ ಎಂಬಿಬಿಎಸ್ ಪದವಿ ಪ್ರದಾನ
ಮೈಸೂರು, ಮಾ.11(ಪಿಎಂ)- ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪದ ವೀಧರರ ಸತ್ಕಾರಕೂಟ (ಪದವಿ ಪ್ರದಾನ) ಮಾ.13ರ ಸಂಜೆ 4ಕ್ಕೆ ನಡೆಯಲಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ್ ತಿಳಿಸಿದರು.

ಮೈಸೂರಿನ ಜೆಎಸ್‍ಎಸ್ ಹಳೆ ಆಸ್ಪತ್ರೆ ಕಟ್ಟಡದಲ್ಲಿನ ನೂತನ `ಸಿಮ್ಯುಲೇಶನ್ ಕೇಂದ್ರ’ ದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬನ್ನಿಮಂಟಪದ ಶ್ರೀ ಶಿವರಾತ್ರೀ ಶ್ವರ ನಗರದ ವೈದ್ಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. 202 ಮಂದಿ ಎಂಬಿಬಿಎಸ್ ಪದವೀಧರರು ಪದವಿ ಸ್ವೀಕರಿಸಲಿದ್ದು, 9 ಪ್ರತಿಭಾನ್ವಿತರಿಗೆ ಚಿನ್ನದ ಪದಕ, ನಗದು ಬಹುಮಾನ ಪ್ರದಾನ ಮಾಡಲಾಗುವುದು. ಅತೀ ಹೆಚ್ಚು ಅಂಕಗಳಿಸಿ ಎಂಬಿಬಿಎಸ್ ನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ಮೈಸೂರಿನ ಡಾ.ಪ್ರೀತಿ ಪ್ರಕಾಶ್ ಪ್ರಭು ಅವರಿಗೆ 5 ಚಿನ್ನದ ಪದಕ, 5 ನಗದು ಬಹುಮಾನ ದೊರೆತಿದೆ ಎಂದರು.

ಉಳಿದಂತೆ ಕೇರಳದ ಡಾ.ಎ.ಮೀನು 2 ಚಿನ್ನದ ಪದಕ, ಚಿಕ್ಕಬಳ್ಳಾಪುರದ ಡಾ. ಕೆ.ಆರ್.ರಶ್ಮಿ 1 ಚಿನ್ನದ ಪದಕ ಹಾಗೂ 2 ನಗದು ಬಹುಮಾನ, ಕೇರಳದ ಡಾ. ಡೆಲಿನಾ ರೋಸ್‍ಮೇರಿ ರೋಜರ್ 1 ಚಿನ್ನದ ಪದಕ, ಸಲ್ವ್ಯಾ ಎಸ್.ರಾಜ್ 3 ನಗದು ಬಹುಮಾನ, ಡಾ.ರಾಜಶ್ರೀ ಆರ್. ಕಲ್ಕುರ 1 ನಗದು ಬಹುಮಾನ, ಮಂಗಳೂ ರಿನ ಡಾ.ಬಿ.ಚಂದ್ರಿಕಾ 3 ನಗದು ಬಹು ಮಾನ, ಪುತ್ತೂರಿನ ಡಾ.ಬಿ.ಎನ್.ಅನುಶ್ರೀ ಮತ್ತು ಚೆನೈನ ಡಾ.ಅಕ್ಷರಾಪ್ರಸಾದ್ ತಲಾ 1 ನಗದು ಬಹುಮಾನ ಪಡೆದುಕೊಳ್ಳಲಿ ದ್ದಾರೆ ಎಂದು ವಿವರಿಸಿದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಡಾ.ಹೆಚ್.ವಿನೋದ್ ಭಟ್ ಮುಖ್ಯ ಅತಿಥಿಯಾಗಿರುವರು. ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಮ ಕುಲಪತಿ ಡಾ.ಬಿ.ಸುರೇಶ್, ಕುಲ ಪತಿ ಡಾ.ಸುರೀಂದ್ರ ಸಿಂಗ್ ಗೌರವ ಅತಿಥಿ ಗಳಾಗಿರುವರು ಎಂದು ತಿಳಿಸಿದರು.

Translate »