ಮುಂದುವರೆದ ಎನ್‍ಟಿಎಂ ಶಾಲೆ ಉಳಿಸುವ ಹೋರಾಟ
ಮೈಸೂರು

ಮುಂದುವರೆದ ಎನ್‍ಟಿಎಂ ಶಾಲೆ ಉಳಿಸುವ ಹೋರಾಟ

July 5, 2021

ಮೈಸೂರು,ಜು.4(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿ ಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ಭಾನುವಾರವೂ ರಂಗಕಲಾವಿದರು, ಸಾಹಿತಿಗಳ ನೇತೃತ್ವದಲ್ಲಿ ಶಾಲೆ ಎದುರು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಈ ಹಿಂದೆ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶಾಲಾ ಜಾಗವನ್ನು ಹೊರತುಪಡಿಸಿ ಉಳಿದ ಜಾಗ ದಲ್ಲಿ ಸ್ಮಾರಕ ನಿರ್ಮಿಸಬಹುದು ಎಂದು ವರದಿ ನೀಡಿದ್ದಾರೆ. ಈ ಮಧ್ಯೆ ಶಾಲೆಯ ಕಟ್ಟಡ ತೆರವುಗೊಳಿಸಿ ವಿವೇಕ ಸ್ಮಾರಕ ನಿರ್ಮಿಸಬೇಕೆಂಬ ಸರ್ಕಾರದ 2013ರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿ ದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸಿ, ಶಾಲೆ ಉಳಿಸಿ ಸ್ಮಾರಕ ನಿರ್ಮಿಸುವಂತೆ ಮರು ಆದೇಶಿಸುವ ಪರಮ ಅಧಿಕಾರ ಸರ್ಕಾರಕ್ಕಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.

ಅಲ್ಲದೆ, ರಂಗಗೀತೆ, ಹೋರಾಟದ ಗೀತೆಗಳನ್ನು ಸಾದರಪಡಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರ ಹಿಸಲಾಯಿತು. ಹಿರಿಯ ಸಮಾಜವಾದಿ ಪ. ಮಲ್ಲೇಶ್, ಸಾಹಿತಿ ಪ್ರೊ.ಕೆ.ಎಸ್.ಭಗ ವಾನ್, ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು, ರಂಗಕರ್ಮಿ ಮೈಮ್ ರಮೇಶ್, ಗಾಯಕ ದೇವಾನಂದ ವರಪ್ರಸಾದ್, ಮುಖಂಡರಾದ ನೆಲೆ ಹಿನ್ನೆಲೆ ಗೋಪಾಲ್, ಎಸ್.ಬಾಲಕೃಷ್ಣ, ಎಂ.ಚಂದ್ರಶೇಖರ್, ತಾಯೂರು ವಿಠಲ ಮೂರ್ತಿ, ಹೊಸಕೋಟೆ ಬಸವರಾಜು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »