ಮಂಡಿ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಇಬ್ಬರು ಬೈಕ್ ಕಳ್ಳರ ಸೆರೆ, 9 ದ್ವಿಚಕ್ರ ವಾಹನ ವಶ
ಮೈಸೂರು

ಮಂಡಿ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಇಬ್ಬರು ಬೈಕ್ ಕಳ್ಳರ ಸೆರೆ, 9 ದ್ವಿಚಕ್ರ ವಾಹನ ವಶ

December 10, 2020

ಮೈಸೂರು, ಡಿ.9(ಎಸ್‍ಪಿಎನ್)- ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, ಆರೋಪಿಗಳಿಂದ ಒಟ್ಟು 3.10 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಕಲ್ಯಾಣಗಿರಿ ನಿವಾಸಿ ವಾಸಿಂಪಾಷ(22), ರಾಜೀವ್ ನಗರದ ಲಿಡ್‍ಕರ್ ಕಾಲೋನಿ ನಿವಾಸಿ ಸಂದೀಪ್ ಅಲಿಯಾಸ್ ದುರ್ಗ ಸಂದೀಪ್(20) ಬಂಧಿತರು.

ಡಿ.8ರ ಸಂಜೆ 4ರಲ್ಲಿ ಪುಲಿಕೇಶಿ ರಸ್ತೆ ಖಬರ್‍ಸ್ಥಾನ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಸ್ಕೂಟರ್‍ನಲ್ಲಿ ಸಂಚರಿಸುತ್ತಿದ್ದ ಆರೋಪಿಗಳಿಬ್ಬ ರನ್ನೂ ಕರ್ತವ್ಯನಿರತ ಪೊಲೀಸರು ತಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ.

ಆರೋಪಿ ವಾಸಿಂಪಾಷ ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಹಾಗೂ ಆರೋಪಿ ಸಂದೀಪ್ ಶ್ರೀರಂಗಪಟ್ಟಣ ಟೌನ್, ಜಯ ಲಕ್ಷ್ಮೀಪುರಂ, ಕುವೆಂಪು ನಗರ, ಉದಯಗಿರಿ ಠಾಣೆಗಳ ವ್ಯಾಪ್ತಿ ಯಲ್ಲಿ ತಲಾ 1 ಹೊಂಡಾ ಡಿಯೋ ಸ್ಕೂಟರ್ ಕಳವು ಮಾಡಿರು ವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳ ಹೇಳಿಕೆ ಮೇರೆಗೆ 9 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು ನಗರದ ಡಿಸಿಪಿ ಗೀತಾ ಪ್ರಸನ್ನ ಹಾಗೂ ಎನ್.ಆರ್. ವಿಭಾಗದ ಎಸಿಪಿ ಎಂ.ಶಿವಶಂಕರ್ ಮಾರ್ಗದರ್ಶನದಲ್ಲಿ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ವಿ. ನಾರಾಯಣಸ್ವಾಮಿ, ಪಿಎಸ್‍ಐ ವಿ.ಆರ್.ಶಭರೀಶ, ಎಎಸ್‍ಐ ಕೆ.ಎಸ್.ಗುರುಸ್ವಾಮಿ ಸಿಬ್ಬಂದಿ ಜಯಪಾಲ, ಜಯಕುಮಾರ್, ಎಂ.ಎಲಿಯಾಜ್, ರವಿಗೌಡ, ಶಂಕರ ಟಿ.ಬಂಡಿವಡ್ಡರ್ ಮತ್ತು ಕರಿಯಪ್ಪ ಕಾರ್ಯಾಚರಣೆ ನಡೆಸಿದ್ದರು.

 

 

Translate »