ವಿವಿಗಳು ಬೋಧನೆ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಮತ
ಮೈಸೂರು

ವಿವಿಗಳು ಬೋಧನೆ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಮತ

June 17, 2018

ಮೈಸೂರು: ವಿಶ್ವ ವಿದ್ಯಾನಿಲಯಗಳು ಉಪನ್ಯಾಸದ ಜೊತೆಗೆ ಸಂಶೋಧನೆಗೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ತುಮಕೂರು ವಿವಿ ಕುಲಪತಿ ವೈ.ಎಸ್.ಸಿದ್ದೇಗೌಡ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.

ಸಂಸ್ಕೃತಿ ಹಾಗೂ ಅರ್ಹತೆ ಇಲ್ಲದವರೂ ವಿಶ್ವ ವಿದ್ಯಾನಿಲಯಗಳ ಕುಲಪತಿಗಳಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಕೃತಿಯನ್ನು ಉಳಿಸಿಕೊಂಡು ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಅತ್ಯಂತ ವಿನೀತ ವ್ಯಕ್ತಿತ್ವದ ಸಿದ್ದೇಗೌಡರು ಉಪಕುಲಪತಿಯಾಗಿ ನೇಮಕವಾಗಿರುವುದು ಸಂತಸದ ಸಂಗತಿ. ಕಾನೂನು, ಕಾಯ್ದೆಯ ಪರಿಧಿಯಲ್ಲಿ ವಿವಿಯನ್ನು ಮುನ್ನಡೆಸಬೇಕು. ಉತ್ತಮ ಕುಲಪತಿಯಾದವರು ಉಪನ್ಯಾಸದ ಜೊತೆಗೆ ಸಂಶೋಧನೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ನೂತನ ಆವಿಷ್ಕಾರ ಸಾಧ್ಯವಾಗುತ್ತದೆ. ಎಲ್ಲಾ ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿವಿಯನ್ನು ಮುನ್ನಡೆಸಬೇಕೆಂದು ಸಲಹೆ ನೀಡಿದರು.

ಹಲವರಿಗೆ ಉನ್ನತ ಸ್ಥಾನ, ಹಣ ಎಲ್ಲವೂ ಇರುತ್ತದೆ ಆದರೆ ಅವರಲ್ಲಿ ಸಂಸ್ಕೃತಿಯೇ ಇರುವುದಿಲ್ಲ. ಆದರೆ ಸುಮಾರು 25 ವರ್ಷದಿಂದ ಸ್ನೇಹಿತರಾಗಿರುವ ಸಿದ್ದೇಗೌಡರು, ಹಣಕ್ಕಿಂತ ಸಂಸ್ಕೃತಿಯನ್ನು ಹೆಚ್ಚು ಸಂಪಾದಿಸಿಕೊಂಡಿದ್ದಾರೆ. ಸದಾ ಓದು-ಬರಹದಲ್ಲಿ ಜ್ಞಾನವಂತರಾಗಿರುವ ಇವರಿಗೆ ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದು ಹೇಗೆ?. ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಬೋಧಿಸಿದರೆ ಪರಿಣಾಮಕಾರಿಯಾಗುತ್ತದೆ? ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಬಹಳ ಹಿಂದೆಯೇ ಸಿದ್ದೇಗೌಡರು ಕುಲಪತಿಗಳಾಗಬೇಕಿತ್ತು. ಕೆಲ ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೂ ಸೂಕ್ತ ಸಂದರ್ಭದಲ್ಲೇ ಉತ್ತಮ ಸ್ಥಾನ ಅಲಂಕರಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶೈಕ್ಷಣ ಕ ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯಿದ್ದು, ಅವರ ನೆರವಿನೊಂದಿಗೆ ತುಮಕೂರು ವಿವಿಯ ಬೆಳವಣಿಗೆಗೆ ಶ್ರಮಿಸಬೇಕೆಂದು ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಹಾಗೆಯೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹೆಚ್.ಕೆ.ರಾಮು ಅವರು, ನೌಕರರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸಿ.ನಂಜುಂಡಯ್ಯ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಹೆಚ್.ಎಲ್.ಯಮುನಾ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್.ಕೃಷ್ಣೇಗೌಡ, ದಾಸೇಗೌಡ, ಸತೀಶ್ ಜವರೇಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »