ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?
ಮೈಸೂರು

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?

June 16, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆ ಗಾರರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸಂಪುಟದ ಸಚಿವರೂ ಆಗಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರೂ, ಅವರು ಈ ಜವಾಬ್ದಾರಿ ವಹಿಸಿ ಕೊಂಡಿಲ್ಲ. ನಾನು ರೈತರು, ಸಾಮಾನ್ಯ ಜನ ರೊಂದಿಗೆ ಬೆಳೆದು ಬಂದಿದ್ದು, ಅವರೊಂದಿಗಿದ್ದು ಕೆಲಸ ಮಾಡಬಹುದಾದ ಖಾತೆಯನ್ನು ನೀಡಬೇಕೆಂದು ಜಿಟಿಡಿ ಕೋರಿಕೊಂಡಿದ್ದಾರೆ. ಅಲ್ಲದೆ ಅವರ ಅಭಿಮಾನಿಗಳು ಸಹ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸದಂತೆ ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ. ಇದೆಲ್ಲದರ ನಡುವೆ ಖಾತೆ ಬದಲಾವಣೆಯ ಚಿಂತನೆಯೂ ನಡೆದಿದ್ದು, ಜಿಟಿಡಿ ಅವರಿಗೆ ಅಬಕಾರಿ, ಎಪಿಎಂಸಿ ಖಾತೆಯನ್ನು ನೀಡಿ, ಉನ್ನತ ಶಿಕ್ಷಣವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಇಲಾಖೆಯ ಸಲಹೆ ಗಾರರನ್ನಾಗಿ ನೇಮಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.

ಮೂರು ತಿಂಗಳ ಹಿಂದಷ್ಟೇ ಪ್ರತಿಷ್ಠಿತ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಕೆ.ಎಸ್.ರಂಗಪ್ಪ ಅವರು, 2009ರಿಂದ 13ರವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಹಾಗೂ 2013ರಿಂದ 2017ರವರೆಗೆ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಕೆನಡಾದಲ್ಲಿ ಸಂಶೋಧಕರಾಗಿ, ಅಮೇರಿಕಾ, ಜಪಾನ್, ಕೋರಿಯಾ, ಫ್ರಾನ್ಸ್, ರಷ್ಯಾ ರಾಷ್ಟ್ರಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಸುಮಾರು 22ಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ಯೂನಿವರ್ಸಿಟಿಗಳ ರಸಾಯನಶಾಸ್ತ್ರ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಶ್ರೇಷ್ಟ ವಿಜ್ಞಾನಿಗಳ ಸಾಲಿನಲ್ಲಿರುವ ಇವರು, ಸಂಶೋಧನಾ ಸಹಯೋಗ, ಶೈಕ್ಷಣ ಕ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆ ಸೇರಿದಂತೆ ಅನೇಕ ಶೈಕ್ಷಣ ಕ ಸಂಘ ಸಂಸ್ಥೆಗಳ ಸದಸ್ಯರಾಗಿ ಅಪಾರ ಅನುಭವ ಗಳಿಸಿಕೊಂಡಿದ್ದಾರೆ. ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲನುಭವಿಸಿದ್ದಾರೆ.

ಹೀಗಾಗಿ ಉನ್ನತ ಶಿಕ್ಷಣ ಇಲಾಖೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ ನಿರ್ವಹಿಸುವಂತಾದರೆ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಇಲಾಖೆಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬಹುದು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಗೃಹ ಇಲಾಖೆ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು.

Translate »