ಜಿಟಿಡಿಗೆ ಅಬಕಾರಿ, ಎಪಿಎಂಸಿ?
ಮೈಸೂರು

ಜಿಟಿಡಿಗೆ ಅಬಕಾರಿ, ಎಪಿಎಂಸಿ?

June 16, 2018

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಖಾತೆ ಬದಲಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಉನ್ನತ ಶಿಕ್ಷಣ ಖಾತೆಯನ್ನು ತಾವೇ ವಹಿಸಿಕೊಂಡು ತಮ್ಮ ಬಳಿ ಇರುವ ಅಬಕಾರಿ ಖಾತೆ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಖಾತೆಗಳನ್ನು ಮುಖ್ಯಮಂತ್ರಿಗಳು ಸೋಮವಾರ ಅಥವಾ ಮಂಗಳವಾರ ಜಿ.ಟಿ.ದೇವೇಗೌಡರಿಗೆ ನೀಡಲಿದ್ದಾರೆ ಎನ್ನಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದಾಗ ಅವರು ತೀವ್ರ ಅಸಮಾಧಾನಗೊಂಡಿದ್ದರು. ಕೇವಲ 8ನೇ ತರಗತಿ ವ್ಯಾಸಂಗ ಮಾಡಿರುವ ತಮಗೆ ಉನ್ನತ ಶಿಕ್ಷಣ ಖಾತೆ ನಿಭಾಯಿಸಲು ಸಾಧ್ಯವಿಲ್ಲ ಎಂದಿದ್ದರಲ್ಲದೇ, ಸದಾ ಕಾಲ ಜನ ಸಂಪರ್ಕದಲ್ಲಿರುವ ತಮಗೆ ರೈತರು ಮತ್ತು ಬಡವರಿಗೆ ನೆರವಾಗಲು ಅನುಕೂಲ ವಾಗುವಂತಹ ಖಾತೆ ನೀಡಬೇಕೆಂದು ಮನವಿ ಮಾಡಿದ್ದರು.

ಜಿ.ಟಿ.ದೇವೇಗೌಡರು ಇದುವರೆವಿಗೂ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳದೇ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದರು. ಇದರ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಪ್ರಥಮ ಸಭೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೇ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.

Translate »