ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧಿಕ ಸಂಖ್ಯೆಯಲ್ಲಿ ಯೋಗ ಪಟುಗಳ ಭಾಗಿಗೆ ಮನವಿ
ಮೈಸೂರು

ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧಿಕ ಸಂಖ್ಯೆಯಲ್ಲಿ ಯೋಗ ಪಟುಗಳ ಭಾಗಿಗೆ ಮನವಿ

June 17, 2018

ಮೈಸೂರು: ಜೂನ್ 21ರಂದು ನಡೆಯಲಿರುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟು ಗಳು ಭಾಗವಹಿಸಿ ಮೈಸೂರು ಮತ್ತೊಮ್ಮೆ ಗಿನ್ನಿಸ್ ದಾಖಲೆ ಪುಟ ಸೇರುವಂತೆ ಮಾಡಬೇಕೆಂದು ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮನವಿ ಮಾಡಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕೋರ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯನ್ನು ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದು, ಮೈಸೂರು ಯೋಗ ಒಕ್ಕೂಟಗಳು, ಟ್ರಾವೆಲ್ ಅಸೋಸಿಯೇಷನ್ ಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಿರುವುದರಿಂದ ಈ ಬಾರಿ 80,000ಕ್ಕೂ ಹೆಚ್ಚು ಮಂದಿ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಜೂನ್ 21ರಂದು ಮೈಸೂರಿನ ಎಲ್ಲಾ ಹೋಟೆಲ್‍ಗಳ ಮಾಲೀಕರು ಹಾಗೂ ನೌಕರ ವರ್ಗ ರೇಸ್ ಕೋರ್ಸ್ ಮೈದಾನಕ್ಕೆ ಆಗಮಿಸಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗೆಯೇ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ನಾರಾಯಣಗೌಡರು ಮನವಿ ಮಾಡಿದ್ದಾರೆ.

Translate »