ಮೃಗಾಲಯ ನಾಳೆಯಿಂದ ವೀಕ್ಷಣೆಗೆ ಮುಕ್ತ
ಮೈಸೂರು

ಮೃಗಾಲಯ ನಾಳೆಯಿಂದ ವೀಕ್ಷಣೆಗೆ ಮುಕ್ತ

June 7, 2020

ಮೈಸೂರು, ಜೂ. 6(ಎಂಟಿವೈ)- ಹಕ್ಕಿಜ್ವರ ಹಾಗೂ ಕೊರೊನಾ ಹಿನ್ನೆಲೆಯಲ್ಲಿ 86 ದಿನಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಜೂ.8ರಿಂದ ಪುನಾ ರಂಭಗೊಳ್ಳಲಿದೆ. ಕೊರೊನಾದಿಂದ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಸಂರಕ್ಷಿಸಲು ಕಟ್ಟೆಚ್ಚರದೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನೂ ಕೈಗೊಂಡು ಪ್ರವಾಸಿಗರನ್ನು ಸ್ವಾಗತಿಸಲು ಚಾಮ ರಾಜೇಂದ್ರ ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಇದರ ಜತೆಗೇ ರಾಜ್ಯದ 9 ಮೃಗಾಲಯಗಳೂ ಸೋಮವಾರದಿಂದ ಮತ್ತೆ ಬಾಗಿಲು ತೆರೆಯಲಿವೆ.

5ನೇ ಅವಧಿಯ ಲಾಕ್‍ಡೌನ್‍ನಲ್ಲಿ ನಿರ್ಬಂಧ ಸಡಿಲಿಸಿದ್ದು, ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮೃಗಾಲಯಗಳ ಪುನಾರಂಭಕ್ಕೆ ಅನುಮತಿ ನೀಡಿವೆ. ಕೊರೊನಾ ವಿರುದ್ಧ ಮಾರ್ಗಸೂಚಿ ಪಾಲಿಸುವಂತೆ, ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿಗಳ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಏನೆಲ್ಲಾ ಕ್ರಮ ಕೈಗೊಳ್ಳಬೇಕು: ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಲಾಕ್ ಡೌನ್ ನಂತರ ಮೃಗಾಲಯ ಪುನಾರಂಭಿಸುವ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಎಸ್‍ಒಪಿ ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಮೈಸೂರು ಮೃಗಾಲಯ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಬಾಗಿಲು ತೆರೆಯಲಿದೆ. ಮೃಗಾಲಯ ವೀಕ್ಷಣೆ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ದೇಹದಲ್ಲಿ ಹೆಚ್ಚು ಉಷ್ಣಾಂಶ ಕಂಡು ಬಂದರೆ ವಾಪಸ್ ಕಳಿಸಲಾಗುತ್ತದೆ. ಅಂತರ ಕಾಯ್ದುಕೊಂಡು ಟಿಕೆಟ್ ಖರೀದಿಸಬೇಕಿದೆ. ಮೃಗಾಲಯ ವೀಕ್ಷಣೆಗೆ ಪ್ರವಾಸಿಗರಿಗೆ ಕೇವಲ 3 ಗಂಟೆಗಳ ಕಾಲಾವಕಾಶ ನೀಡಲಾಗಿದೆ. 2 ಕಾಲು ದಾರಿಗಳಲ್ಲಿ ಪ್ರವಾಸಿಗರು ಅಂತರ ಕಾಯ್ದುಕೊಂಡು ಹೋಗುವಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಲಗೇಜ್ ಅಥವಾ ಲಾಕರ್ ರೂಂ ಪ್ರವೇಶ ನಿರ್ಬಂಧಿಸ ಲಾಗಿದೆ. ಮೃಗಾಲಯ ಆವರಣದಲ್ಲಿ ಬ್ಯಾರಿಕೇಡ್ ಮುಟ್ಟಬಾರದು, ಉಗುಳಬಾರದು, ಪಾನ್ ಮಸಾಲಾ, ಖೈನಿ ಬಳಸಬಾರದು ಎಂದೂ ಎಚ್ಚರಿಸಲಾಗಿದೆ. 1 ಗಂಟೆಯಲ್ಲಿ 1 ಸಾವಿರ ಪ್ರವಾಸಿಗರಿಗೆ ಮೃಗಾಲಯ ವೀಕ್ಷಣೆಗೆ ಪ್ರವೇಶವಿರುತ್ತದೆ. ಇದರಿಂದ 1 ದಿನದಲ್ಲಿ 8,000 ಜನರು ಭೇಟಿ ನೀಡಲು ಅವಕಾಶವಿದೆ. ಪ್ರತಿಯೊಬ್ಬರು ಮೆಡಿಕೇಟೆಡ್ ಫುಟ್‍ಮ್ಯಾಟ್ ಮೇಲೆ ಪಾದವೂರಿ ಒಳಪ್ರವೇಶಿಸಬೇಕು. ಸಿಸಿ ಕ್ಯಾಮರಾ ಕಣ್ಗಾವಲು ಇರಲಿದೆ. ಪ್ರವಾಸಿಗರು ನಿಯಮ ನಿರ್ಲಕ್ಷಿಸಿ ದರೆ ತಲಾ 1,000 ರೂ. ದಂಡ ವಿಧಿಸಲಾಗುತ್ತದೆ. ಮೃಗಾಲಯ ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ ವಾಗಿ ಬಳಸಬೇಕು. ಪ್ರಾಣಿಪಾಲನೆ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸುವ ಜತೆಗೆ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ವಿಲೇವಾರಿಗೆ ಹಳದಿ ಬಣ್ಣದ ಬುಟ್ಟಿ ಇಡಲಾಗಿದೆ ಎಂದರು.

ನಿರ್ಬಂಧ: ಶೀತ, ಜ್ವರ, ಕೆಮ್ಮು ಇರುವವರಿಗೆ, 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೆ ಮೃಗಾಲಯ ಪ್ರವೇಶ ಅವಕಾಶವಿಲ್ಲ.

Translate »