ಕರ್ತವ್ಯಕ್ಕೆ ಹಾಜರಾಗುವ ಆಶಾಭಾವನೆ ಇದೆ
ಮೈಸೂರು

ಕರ್ತವ್ಯಕ್ಕೆ ಹಾಜರಾಗುವ ಆಶಾಭಾವನೆ ಇದೆ

December 14, 2020
  • ಖಾಸಗಿ ವಾಹನಗಳ ಮುಕ್ತ ಸಂಚಾರಕ್ಕೂ ಅವಕಾಶ
  • ಚಾಲಕ, ನಿರ್ವಾಹಕರಿಗೆ ಸೂಕ್ತ ಭದ್ರತೆ

ಬೆಂಗಳೂರು, ಡಿ.13-ಕೋಡಿಹಳ್ಳಿ ಚಂದ್ರಶೇಖರ್ ಮುಖಂಡತ್ವದ ಸಾರಿಗೆ ನೌಕರರ ಒಕ್ಕೂಟ ಮುಷ್ಕರ ಮುಂದುವರೆಸು ವುದಾಗಿ ಹೇಳಿದ್ದರೂ, ಹಲವಾರು ನೌಕರರು ನಾಳೆ (ಡಿ.14) ಕರ್ತವ್ಯಕ್ಕೆ ಹಾಜರಾಗುವ ಆಶಾಭಾವನೆ ಇದೆ ಎಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ನೌಕರರ ಮುಖಂ ಡರ ಜೊತೆ ಸಭೆ ನಡೆಸಿದ್ದೇವೆ. ಸಭೆಯ ಮಧ್ಯೆಯೇ ಮುಖಂಡರು ಹೊರ ಹೋಗಿ ಮೊಬೈಲ್ ಮೂಲಕ ಸಮಾ ಲೋಚನೆ ನಡೆಸುವುದಕ್ಕೂ ಅವಕಾಶ ನೀಡಿದ್ದೇವೆ. ಅವರು ಹತ್ತನ್ನೆರಡು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅದರಲ್ಲಿ 8 ಬೇಡಿಕೆಗಳಿಗೆ ಒಪ್ಪಿದ್ದೇವೆ. ಸಂಧಾನ ತೃಪ್ತಿ ದಾಯಕವಾಗಿದೆ ಎಂದು ಕೆಎಸ್‍ಆರ್‍ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ಮಾಧ್ಯಮಗಳ ಮುಂದೆ ಹೇಳಿ, ಮುಷ್ಕರ ಅಂತ್ಯವಾಗಿದೆ ಎಂದೂ ಕೂಡ ಘೋಷಿಸಿದ್ದರು. ಆನಂತರ ಕೋಡಿಹಳ್ಳಿ ಚಂದ್ರಶೇಖರ್ ಮಾತು ಕೇಳಿ ಉಲ್ಟಾ ಹೊಡೆದಿದ್ದಾರೆ ಎಂದರು. ಮುಷ್ಕರ ಅಂತ್ಯವಾಗುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂ ತೆಯೇ ರಾಜ್ಯದ ವಿವಿಧೆಡೆ ನೌಕರರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನೌಕರರಿಗೆ ಸರ್ಕಾರದ ನಿರ್ಧಾರ ತೃಪ್ತಿ ತಂದಿದೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಸ್ವಪ್ರತಿಷ್ಠೆಯಿಂದ ಮುಷ್ಕರ ಮುಂದುವರೆ ಸಲಾಗಿದೆ. ಇಲ್ಲೊಂದು-ಅಲ್ಲೊಂದು ಮಾತನಾಡುವ ಮುಖಂಡರ ಬಗ್ಗೆ ನೌಕರರು ಜಾಗ್ರತೆ ವಹಿಸಬೇಕಾಗಿದೆ. ನಾಳೆ ಹಲವಾರು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂಬ ಆಶಾಭಾವನೆ ಇದೆ. ಅವರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು. ಖಾಸಗಿ ವಾಹನಗಳ ಸಂಚಾರಕ್ಕೂ ಮುಕ್ತ ಅವಕಾಶ ನೀಡಲಾಗಿದೆ. ಬಸ್, ಟೆಂಪೊ ಟ್ರಾವೆಲ್, ಟ್ಯಾಕ್ಸಿ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳೂ ಮುಕ್ತವಾಗಿ ಸಂಚರಿಸಬಹುದಾಗಿದೆ. ಆ ವಾಹನಗಳ ತಪಾಸಣೆ ನಡೆಸದಂತೆ ಆರ್‍ಟಿಓ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.
ಸಂಧಾನ ಯಶಸ್ವಿಯಾಗಿದೆ, ಕರ್ತವ್ಯಕ್ಕೆ ಹಾಜರಾಗಿ

 

Translate »