ಕೋವಿಡ್ ನಿಯಮಾವಳಿಗಳಲ್ಲಿ ಬದಲಾವಣೆ ಇಲ್ಲ
News, ಮೈಸೂರು

ಕೋವಿಡ್ ನಿಯಮಾವಳಿಗಳಲ್ಲಿ ಬದಲಾವಣೆ ಇಲ್ಲ

January 7, 2022

ಬೆಂಗಳೂರು, ಜ.೬(ಕೆಎಂಶಿ)-ಕೋವಿಡ್ ನಿಯಮಗಳ ಬದಲಾವಣೆ ಇಲ್ಲ. ವಾರಾಂತ್ಯದ ಕರ್ಫ್ಯೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂವನ್ನು ರದ್ದು ಗೊಳಿಸಬೇಕು, ಇಲ್ಲವೇ ನಿಯಮಾವಳಿಗಳನ್ನು ಸಡಿಲಿಸಬೇಕೆಂದು ಇಂದಿನ ಸಭೆಯಲ್ಲಿ ಕೆಲವು ಸಚಿವರುಗಳು ಮನವಿ ಮಾಡಿದ್ದರು. ಸದ್ಯಕ್ಕೆ ನಿಯಮಾವಳಿಗಳಲ್ಲಿ ಬದಲಾವಣೆ ಸಾಧ್ಯವಿಲ್ಲ. ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು, ಜನವರಿ ೧೪ ಇಲ್ಲವೇ ೧೫ ರಂದು ಮತ್ತೆ ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿ, ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ. ಅಲ್ಲಿಯವರೆಗೂ ಹಾಲಿ ನಿಯಮಾವಳಿಗಳೇ ಮುಂದುವರೆಯುತ್ತವೆ ಎಂದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಜೀವ ಮತ್ತು ಜೀವನ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿಯಮಾವಳಿಗಳನ್ನು ತಂದಿದ್ದೇವೆ. ಬೆಂಗಳೂರು ಹೊರತುಪಡಿಸಿ, ಉಳಿದೆಡೆ ಕರ್ಫ್ಯೂನ್ನು ರದ್ದು ಮಾಡಿದರೆ, ಇಲ್ಲಿನ ಜನರು ಇತರ ನಗರ ಇಲ್ಲವೇ ಗ್ರಾಮೀಣ ಭಾಗಕ್ಕೆ ಹಾರಿ ರೋಗ ತರುತ್ತಾರೆ. ಎರಡನೇ ಅಲೆಯಲ್ಲಿ ನಾವು ಬೆಂಗಳೂರಿನಲ್ಲಿ ಬಿಗಿ
ಕ್ರಮ ಕೈಗೊಳ್ಳುತ್ತಿದ್ದಂತೆ ರಾಜಧಾನಿ ಬಿಟ್ಟು ಜನರು ಬೇರೆ ನಗರ ಇಲ್ಲವೇ ತಮ್ಮ ಊರುಗಳಿಗೆ ಸೇರಿದರು. ಇದರಿಂದ ಸೋಂಕು ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿತು.
ಇದನ್ನು ಗಮನದಲ್ಲಿಟ್ಟುಕೊಂಡೇ ಇಡೀ ರಾಜ್ಯಾದ್ಯಂತ ನಿಯಮಾವಳಿಗಳನ್ನು ಜಾರಿಗೊಳಿಸಿದ್ದೇವೆ. ಕಾಂಗ್ರೆಸ್ ರ‍್ಯಾಲಿಗೆ ಅಡ್ಡಿ ಮಾಡಬೇಕೆಂಬ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಂಡಿಲ್ಲ. ಈ ಯಾತ್ರೆಯಿಂದ ಸರ್ಕಾರಕ್ಕೆ ಯಾವುದೇ ಗಂಡಾAತರ ಇಲ್ಲ. ರಾಜ್ಯ ಹಾಗೂ ದೇಶದಲ್ಲಿ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತದೆ. ಇದನ್ನು ಪ್ರಾಥಮಿಕ ಹಂತದಲ್ಲೇ ನಿಯಂತ್ರಿಸಲು ಕೆಲವು ಬಿಗಿ ಕ್ರಮ ಕೈಗೊಂಡಿದ್ದೇವೆ ಎಂದರು. ಇಂದಿನ ಸಭೆಯಲ್ಲೂ ಇಡೀ ರಾಜ್ಯಕ್ಕೆ ಕಠಿಣ ಕ್ರಮ ಏತಕ್ಕೆ ಎಂದು ಕೆಲವು ಸಚಿವರು ಪ್ರಶ್ನಿಸಿದರು. ಆದರೆ ತಜ್ಞರ ಅಭಿಪ್ರಾಯವನ್ನು ಅವರಿಗೆ ಮನವರಿಕೆ ಮಾಡಿದ್ದಲ್ಲದೆ, ಕಳೆದ ಎರಡನೇ ಅಲೆಯಲ್ಲಿ ಉಂಟಾದ ಅವಘಢಗಳನ್ನು ವಿವರಿಸಿ, ಮುಂದೆ ಪರಿಸ್ಥಿತಿ ಸುಧಾರಿಸಿದರೆ, ಮತ್ತೆ ಸಭೆ ಸೇರಿ ನಿಯಮಾವಳಿಗಳನ್ನು ಸಡಿಸಲು ಪರಿಶೀಲಿಸೋಣ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.

Translate »