ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ
News

ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ

January 28, 2022

ಬೆಂಗಳೂರು, ಜ.27(ಕೆಎಂಶಿ)- ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಈವರೆಗೆ ಹೋಗಿಲ್ಲ. ಇನ್ನು ಮುಂದೆಯೂ ಹೋಗುವು ದಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳು ವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ತಲುಪಲು ಶ್ರಮಿಸುತ್ತೇವೆ. 2023ಕ್ಕೆ ಕಾರ್ಯಕರ್ತರ ಶ್ರಮ ಸಾಬೀತು ಮಾಡುತ್ತೇವೆ. ಆಗ ಜೆಡಿಎಸ್‍ನ ಶಕ್ತಿ ಏನು, ಜೆಡಿಎಸ್ ಬಿಟ್ಟು ಏನೂ ಮಾಡಲು ಆಗಲ್ಲ ಎಂದಷ್ಟೇ ಹೇಳಿದ್ದೆ. ಅಂದರೆ ಬೇರೆ ಪಕ್ಷಗಳು ಕಡಿಮೆ ಸ್ಥಾನ ಗೆದ್ದರೆ ಅವರ ಜತೆ ಸೇರಿ ಅಧಿಕಾರ ಮಾಡುತ್ತೇವೆ ಎಂದಲ್ಲ. ನನ್ನ ಹೇಳಿಕೆಯ ಬಗ್ಗೆ ಅನ್ಯ ಅರ್ಥ ಬೇಡ. ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ. ಕೊರೊನಾ ಇರುವ ಕಾರಣಕ್ಕೆ ಪಕ್ಷ ಸಂಘಟನೆಗೆ ವೇಗ ನೀಡಿಲ್ಲ. ಕೆಲ ಕಾಲ ಸಂಘಟನೆಯ ಕೆಲಸ ನಿಂತಿತ್ತು. ನಮ್ಮ ಸಂಘಟನೆಯ ಚಟುವಟಿಕೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಆದರೆ ಆಂತರಿಕವಾಗಿ ಪಕ್ಷ ಸಂಘಟನೆ ಕಾರ್ಯ ಮಾಡುತ್ತಿದ್ದೇವೆ. ಬೇರೆ ಪಕ್ಷಗಳು ಅತಂತ್ರ ಆದಾಗ ಜೆಡಿಎಸ್ ಸ್ವತಂತ್ರವಾಗುತ್ತದೆ. ಅದು ಕುಮಾರಸ್ವಾಮಿ ಅವರ ಸದಾಶಯ ಆಗಿರಬಹುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರೇ ಅತಂತ್ರವಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ. ಅವರ ಶಾಸಕರು, ಸಚಿವರು ಸಿದ್ದರಾಮಯ್ಯ ಸಂಪರ್ಕದಲ್ಲಿ ಇದ್ದಾರೆ ಎಂದರೆ, ಅಂಥವರಿಗೆ ಬಿಜೆಪಿ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ. ಆದರೆ ಗೊಂದಲ ಸೃಷ್ಟಿ ಮಾಡುವು ದಕ್ಕೆ ನಾವು ಎಲ್ಲೂ ಅವಕಾಶ ಕೊಟ್ಟಿಲ್ಲ. ಅವರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿಕ್ಕೆ ಆಗಿಲ್ಲ ಬಿಜೆಪಿ ಪಕ್ಷಕ್ಕೆ. ಬಿಜೆಪಿ ಪಕ್ಷದ ಉಳಿವಿಗಾಗಿ ಅಲ್ಲಿನ ನಾಯಕರು ಏನು ಮಾಡುತ್ತಿದ್ದಾರೋ ಹಾಗೇ ನಾವೂ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸಂಘಟನೆಯನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಜನತಾ ಪರಿವಾರದ ನಾಯಕರು ಬೇರೆ ಬೇರೆ ಕಡೆ ಸೆಟಲ್ ಆಗಿದ್ದಾರೆ. ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ. ಯುವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ನಮ್ಮ ಆದ್ಯತೆ. ಮೊದಲಿನಿಂದಲೂ ಜೆಡಿಎಸ್ ಗುರು ಮನೆ ಇದ್ದಂತೆ. ಹಲವಾರು ಜನ ಇಲ್ಲಿಂದ ನಾಯಕರಾಗಿ ಬೆಳೆದು ಹೋಗಿದ್ದಾರೆ.

ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎಂದು ಕೆಲವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾರ್ಯಕರ್ತರ ಶ್ರಮ ನಮ್ಮ ಪಕ್ಷಕ್ಕೆ ಇದೆ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಕಾರ್ಯಗತ ಆಗಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಮನದಟ್ಟು ಮಾಡಿಕೊಡುತ್ತವೆ. ಆ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿ ದ್ದೇವೆ. ನಮ್ಮ ಪಕ್ಷದ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ. ಜನರ ವಿಶ್ವಾಸ ಗಳಿಸಲು ಎಲ್ಲ ಕ್ರಮ ವಹಿಸುತ್ತೇವೆ. ಈ ಬಗ್ಗೆ ಅನ್ಯ ಪಕ್ಷಗಳು ಮಾತನಾಡುವ ಅಗತ್ಯ ಇಲ್ಲ ಎಂದರು.

Translate »