ಮೈಸೂರು, ಜು. 11(ಆರ್‍ಕೆ)- ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ನಿರ್ಬಂಧ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮ ಶೇಖರ್ ತಿಳಿಸಿದ್ದಾರೆ.
ಮೈಸೂರಲ್ಲಿ ಮಾಧ್ಯಮ ಪ್ರತಿ ನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಟ್ರಾವೆಲ್ ಹಿಸ್ಟರಿ ಇದ್ದವರಿಗೆ ಕೊರೊನಾ ಸೋಂಕು ದೃಢಪಡುತ್ತಿರುವುದು ನಿಜ. ಹಿಂದೆ ಜನರನ್ನು ಬೆಂಗಳೂರಿಗೆ ಬರಬೇಡಿ ಎನ್ನುತ್ತಿದ್ದರು. ಆದರೆ ಈಗ ಬೆಂಗಳೂರಿನಿಂದ ಬರಬೇಡಿ ಎಂದು ಅಲ್ಲಲ್ಲಿ ಗ್ರಾಮದ ಜನರು ರಸ್ತೆಗೆ ಅಡ್ಡಗಟ್ಟಿ ತಡೆಯೊಡ್ಡುತ್ತಿರುವುದು ಕಂಡುಬರುತ್ತಿದೆ ಎಂದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚರ್ಚಿಸುತ್ತಿದ್ದೇವೆ. ಆದರೆ ಬೆಂಗಳೂರು-ಮೈಸೂರು ನಡುವೆ ಸಂಚಾರ ಬಂದ್ ಮಾಡುವ ಬಗ್ಗೆ ಸದ್ಯಕ್ಕೆ ನಿರ್ಧರಿಸುವುದಿಲ್ಲ. ಆದರೆ ಅಂತರ ರಾಜ್ಯ ಸಂಚಾರ ನಿರ್ಬಂಧಿಸುವ ಬಗ್ಗೆ
ಕ್ಯಾಬಿನೆಟ್‍ನಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳ ಲಾಗುವುದು ಎಂದು ಸಚಿವರು ತಿಳಿಸಿದರು.
ಡಿಸಿ ವರ್ಗಾವಣೆ ಇಲ್ಲ: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರನ್ನು ವರ್ಗಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನೀವು ಮಾಧ್ಯಮದವರಷ್ಟೇ ಕೇಳುತ್ತಿರುವುದರಿಂದ ನನಗೆ ತಿಳಿಯಿತು. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಅವರನ್ನು ವರ್ಗಾಹಿಸುವ ಪ್ರಸ್ತಾಪವಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟ ಪಡಿಸಿದರು. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅಭಿರಾಂ ಜಿ. ಶಂಕರ್‍ರನ್ನು ವರ್ಗಾವಣೆ ಮಾಡಲು ನಾನು ಬಿಡುವುದಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.