ಕರ್ಣಂಗೇರಿ ಬೆಟ್ಟದಲ್ಲಿ ಮೈದಾಳುತ್ತಿದೆ ಸಾಲುಮರದ ತಿಮ್ಮಕ್ಕ ಪಾರ್ಕ್
ಕೊಡಗು

ಕರ್ಣಂಗೇರಿ ಬೆಟ್ಟದಲ್ಲಿ ಮೈದಾಳುತ್ತಿದೆ ಸಾಲುಮರದ ತಿಮ್ಮಕ್ಕ ಪಾರ್ಕ್

March 2, 2020

ಮಡಿಕೇರಿ,ಮಾ.1-ನಗರದಲ್ಲಿ ಸ್ವಾಗತ ಬೆಟ್ಟವೆಂದೇ ಹೆಸರುವಾಸಿಯಾಗಿರುವ ಕರ್ಣಂಗೇರಿ ಬೆಟ್ಟದಲ್ಲಿ ಸದ್ದಿಲ್ಲದೆ ಸಾಲು ಮರದ ತಿಮ್ಮಕ್ಕ ಪಾರ್ಕ್‍ವೊಂದು ಸುಮಾರು 45 ಎಕರೆ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರವಾಸೋದ್ಯಮ ಮತ್ತು ಪರಿಸರ ಜಾಗೃತಿಯ ಉದ್ದೇಶದಿಂದ ನಗರದ ಸಮೀಪದಲ್ಲೇ ಸಾಲುಮರದ ತಿಮ್ಮಕ್ಕ ಹೆಸರಿನ ಟ್ರೀ ಪಾರ್ಕ್ ಯೋಜನೆ ಸಾಕಾರಗೊಳ್ಳು ತ್ತಿದ್ದು, ಸುಮಾರು 50 ಲಕ್ಷ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಗೊಳ್ಳುತ್ತಿದೆ.

ಅರಣ್ಯ ಪ್ರದೇಶದ ಅಭಿವೃದ್ಧಿ ಮತ್ತು ಪ್ರವಾಸಿಗರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹಿಂದಿನ ಸರಕಾರದ ಅರಣ್ಯ ಸಚಿವ ರಮಾನಾಥ್ ರೈ ಅವರು ಸಾಲು ಮರದ ತಿಮ್ಮಕ್ಕ ಹೆಸರಿನ ಟ್ರೀ ಪಾರ್ಕ್ ಯೋಜನೆಯನ್ನು ಜಾರಿಗೆ ತಂದಿದ್ದರು. ಇದೀಗ ನಗರದ ಕರ್ಣಂಗೇರಿಯ ಸ್ವಾಗತ ಬೆಟ್ಟದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಈಗಾಗಲೇ ವ್ಯೂ ಪಾಯಿಂಟ್, ವಿಶ್ರಾಂತಿ ಸ್ಥಳ, ದ್ವಾರಗಳ ಕೆಲಸಗಳು ಪ್ರಗತಿಯಲ್ಲಿದೆ.

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಇಂತಹ ಟ್ರೀ ಪಾರ್ಕ್‍ಗಳನ್ನು ನಿರ್ಮಿಸುವುದು ಹಿಂದಿನ ಸರಕಾರದ ಉದ್ದೇಶವಾಗಿತ್ತು. ತೇಗ, ಬೀಟೆ, ಹೊನ್ನೆ, ರಕ್ತ ಚಂದನ, ಸಿಲ್ವರ್, ಬಿದಿರು ಸಸಿಗಳ ಜತೆಗೆ ಹೆಬ್ಬೇವು, ಹುಣಸೆ, ಹತ್ತಿ, ಬಿಲ್ವಪತ್ರೆ, ಹೊಂಗೆ, ಆಲ, ತಪಸಿ, ಕಮರ ಸೇರಿ ದಂತೆ ಆಯಾ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಔಷಧೀಯ ಸಸ್ಯಗಳನ್ನು ಬೆಳೆಸು ವುದು ಯೋಜನೆಯ ಗುರಿಯಾಗಿದೆ.

ಪಾರ್ಕ್‍ನ ವಿಶೇಷತೆ: ಉದ್ಯಾನವನದ ಮಹಾದ್ವಾರವನ್ನು ಸಿಮೆಂಟ್‍ನಿಂದ ಮರ, ಬಿದಿರು ರೂಪದಲ್ಲಿ ಆಕರ್ಷಣೀಯವಾಗಿ ನಿರ್ಮಾಣ ಮಾಡಲಾಗುತ್ತಿದೆ. ಒಳಭಾಗ ದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲ ವಾದ ಚಿಲ್ರ್ಡನ್ ಪಾರ್ಕ್, ರೂಫ್ ಲೈನ್, ಚಿಟ್ಟೆ ಉದ್ಯಾನ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿ ಗರಿಗೆ ಕುಳಿತುಕೊಳ್ಳಲು ಬೆಂಚ್‍ಗಳ ವ್ಯವಸ್ಥೆ, ವಾಯು ವಿಹಾರದ ರಸ್ತೆ ನಿರ್ಮಾಣ ಅಲ್ಲದೆ ನಾಲ್ಕೈದು ಕಡೆಗಳಲ್ಲಿ ಪ್ರವಾಸಿಗರು ಕುಳಿತು ವಿಶ್ರಾಂತಿ ಪಡೆಯಲು ಅತ್ಯಂತ ಆಕರ್ಷಣೀಯವಾದ ವ್ಯವಸ್ಥೆ ಯೋಜನೆ ಯಲ್ಲಿ ಸೇರಿಕೊಂಡಿದೆ. ಅಲ್ಲದೆ ವಿವಿಧ ಜಾತಿಗಳ ಹೂವುಗಳು ಹಾಗೂ ಸುಂದರ ಉದ್ಯಾನವನದ ಕಲ್ಪನೆಯಿದ್ದು, ಮುಂದಿನ ವರ್ಷದೊಳಗೆ ಸಾಲು ಮರದ ತಿಮ್ಮಕ್ಕ ಪಾರ್ಕ್ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಗಮನ ಸೆಳೆಯಲಿದೆ.

a scenic stretch of Thimmakka Park at Karnangeri Hill-1

25 ಲಕ್ಷಕ್ಕೆ ಪ್ರಸ್ತಾವನೆ: ಇಲ್ಲಿ ವಿಶ್ರಾಂತಿ ಮಾಡಲು ಪಾರ್ಕ್‍ನಲ್ಲಿ 4 ಗೋಪುರ ಮಾದರಿಯಲ್ಲಿ ಪ್ಯಾರಗೋಲಾವನ್ನು ಕಟ್ಟಲಾಗಿದೆ. ಆದರೆ ಬೆಟ್ಟದ ತುತ್ತತುದಿ ಯಲ್ಲಿ ಕಟ್ಟಲಾಗಿರುವ ಮಂಟಪ ನಗರಕ್ಕೆ ಗೋಚರಿಸುತ್ತದೆ. ಅಲ್ಲದೆ ಈ ವ್ಯೂ ಪಾಯಿಂಟ್ ನಿಂದ ಮಡಿಕೇರಿಯ ಶೇ.60ರಷ್ಟು ನಗರ ಪ್ರದೇಶ ಕಾಣಿಸುತ್ತದೆ. ಅಲ್ಲದೇ ತಂಪಾದ ವಾತಾವರಣದ ನಡುವೆ ಕುಳಿತು ಪ್ರಕೃತಿಯ ಸೌಂದರ್ಯ ಸವಿಯಲು ಆಕರ್ಷಣೀಯ ಸ್ಥಳ ಇದಾಗಿದೆ. ಚಿಟ್ಟೆ ಉದ್ಯಾನ, ರೂಫ್ ಲೈನ್, ರಸ್ತೆ, ಪಾರ್ಕಿಂಗ್ ಮಾಡಲು ಅರಣ್ಯ ಇಲಾಖೆ 25 ಲಕ್ಷಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ರಾಜ್ಯದಲ್ಲಿ ನಿರ್ಮಾಣ ಮಾಡ ಲಾದ ಸಾಲುಮರದ ತಿಮ್ಮಕ್ಕ ಪಾರ್ಕ್ ನಲ್ಲಿ ಈಗಾಗಲೇ ಭೇಟಿಗೆ 10 ರೂ. ನಿಗದಿ ಪಡಿಸಲಾಗಿದೆ. ಅದೇ ರೀತಿ ಇಲ್ಲಿಯೂ ನಿಗಧಿಪಡಿಸುವ ಸಾಧ್ಯತೆ ಇದೆ. ಈಗಾ ಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಉದ್ಘಾ ಟನೆಯಾಗುವ ಸಾಧ್ಯತೆಗಳಿವೆ.

ಈಗಾಗಲೆ ಪ್ರಕೃತಿ ರಮಣೀಯ ತಾಣವಾದ ಮಾಂದಲ್‍ಪಟ್ಟಿ ಪ್ರದೇಶ ಪ್ರವಾಸೋದ್ಯಮದ ಹೆಸರಿನಲ್ಲಿ ಸಂಪೂರ್ಣವಾಗಿ ಕಲುಷಿತವಾಗಿದ್ದು, ಪ್ಲಾಸ್ಟಿಕ್, ಮದ್ಯದ ಬಾಟಲಿಮಯವಾಗಿದೆ. ಪ್ರವಾಸಿತಾಣಕ್ಕೆ ತೆರಳುವ ಪ್ರವಾಸಿಗರು ಹಸಿರ ಪರಿಸರವನ್ನು ಮನಬಂದಂತೆ ಹಾಳು ಮಾಡುತ್ತಿದ್ದಾರೆ. ಇದೀಗ ನೈಸರ್ಗಿಕವಾಗಿ ಬೆಳೆದ ಅರಣ್ಯ ಪ್ರದೇಶವಾದ ಕರ್ಣಂಗೇರಿಯ ಹಸಿರು ಸ್ವಾಗತ ಬೆಟ್ಟವೂ ಪ್ರವಾಸಿಗರ ಪಾಲಾದರೆ, ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ರೀತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿ ತುಳುಕುವ ಸಾಧ್ಯತೆಗಳು ಹೆಚ್ಚಾಗಬಹುದು ಎಂಬ ಆತಂಕ ಸ್ಥಳೀಯರಲ್ಲಿದೆ. ಮಾಂದಲ್‍ಪಟ್ಟಿ ತಾಣಕ್ಕೆ ಬರುವ ಪ್ರವಾಸಿಗರು ನೀರಿನ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್, ಇತ್ಯಾದಿ ವಸ್ತುಗಳನ್ನು ಅಲ್ಲಲ್ಲಿ ಎಸೆಯುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಸಾಲುಮರದ ತಿಮ್ಮಕ್ಕ ಪಾರ್ಕ್‍ಗೆ ಆಗಮಿಸುವ ಪ್ರವಾಸಿಗರು ಮಾಲಿನ್ಯ ಮಾಡುವ ಸಾಧ್ಯತೆಗಳಿವೆ. ಇದರಿಂದ ಟ್ರೀ ಪಾರ್ಕ್ ಯೋಜನೆಯಡಿ ಅರಣ್ಯಾಭಿವೃದ್ಧಿ ಮರೀಚಿಕೆಯಾದರು ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪ್ರಸಾದ್ ಸಂಪಿಗೆಕಟ್ಟೆ

Translate »