ಜೂ.5ರಂದು ಸಾವಿರ ಗಿಡ ನೆಡುವ ಕಾರ್ಯಕ್ರಮ
ಮೈಸೂರು

ಜೂ.5ರಂದು ಸಾವಿರ ಗಿಡ ನೆಡುವ ಕಾರ್ಯಕ್ರಮ

June 3, 2019

ಮೈಸೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜೂ.5 ರಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಕಾರ್ಯ ಗ್ರಾಮದ ಸಮೀಪ ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಟಿ ವೃಕ್ಷ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜೂ.5 ಬೆಳಿಗ್ಗೆ 7.35ಕ್ಕೆ ಹುಲ್ಲಹಳ್ಳಿಯ ಯಜಮಾನ ಚಿತ್ರಮಂದಿರದ ಬಳಿ ಪರಿಸರ ಪ್ರೇಮಿಗಳು, ಸ್ವಯಂಸೇವಕರೊಂದಿಗೆ ಗಿಡ ನೆಡುವ ಸ್ಥಳಕ್ಕೆ ತೆರಳಿ ಸಾವಿರ ಗಿಡಗಳನ್ನು ನೆಡಲಾಗುವುದು.

ಕಳೆದ 4 ವರ್ಷಗಳಿಂದ ಪ್ರತಿಷ್ಠಾನವು ಪರಿಸರ ಸಂರಕ್ಷಣೆ ಕುರಿತಂತೆ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಗಿಡ-ಮರಗಳ ರಕ್ಷಣೆ, ಪಾಲನೆ, ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ಗಿಡ ನೆಡುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಿಡಗಳನ್ನು ಉಚಿತ ವಾಗಿ ನೀಡಲಾಗುತ್ತಿದೆ. ಈ ವರ್ಷ 25 ಸಾವಿರ ಗಿಡ ನೆಡಲು ನಿರ್ಧರಿಸಲಾಗಿದ್ದು, ಪ್ರತಿಷ್ಠಾನದ ವತಿಯಿಂದ ಗಿಡ ಬೆಳೆಸಲಾಗಿದೆ. ಶಾಲಾ-ಕಾಲೇಜು ಆವರಣ, ರಸ್ತೆ ಬದಿ, ಮನೆ, ಕಚೇರಿ ಆವರಣ ಸೇರಿದಂತೆ ಮರ ಬೆಳೆಯಲು ಯೋಗ್ಯವಾದ ಸ್ಥಳಗಳಲ್ಲಿ ನೆಡಲು ಸಸಿ ವಿತರಿಸಲಾಗುತ್ತದೆ ಎಂದರು. ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಗಿಡ ನೆಟ್ಟು ಪೋಷಿಸುವುದು ಅನಿವಾರ್ಯ. ಮಾರ್ಚ್, ಏಪ್ರಿಲ್‍ನಲ್ಲಿ ಬರುವ ತಾಪಮಾನ ಸೆಪ್ಟೆಂಬರ್‍ನಲ್ಲಿಯೇ ಅನುಭವಿಸುವಂತಾಗಿದೆ. ಮೈಸೂರಿನಲ್ಲಿ ವಾಡಿಕೆ ತಾಪಮಾನಕ್ಕಿಂತ ಹೆಚ್ಚು ಸೆಲ್ಸಿಯಸ್ ತಲುಪಿದೆ. ಮುಂದಿನ ಬೇಸಿಗೆಯವರೆಗೆ ಸಸಿಗಳನ್ನು ನೆಟ್ಟು ಸ್ವಲ್ಪ ಸಲಹಿದರೆ ಹೆಚ್ಚುತ್ತಿರುವ ತಾಪಮಾನ ನಿಯಂತ್ರಿಸಬಹುದು. ಗಿಡ ನೆಡಲು ಆಸಕ್ತರು ವಿವರಗಳಿಗೆ ಮೊ.ಸಂ. 9148520681 ಸಂಪರ್ಕಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ವಿನಾಯಕ, ಮಾರ್ಗದರ್ಶಕರಾದ ಭಾಮಿ ಶೆಣೈ, ವೆಂಕಟೇಶ್, ಗಾಯಿತ್ರಿ ಇದ್ದರು.

Translate »