ಮೂರು ಕೃಷಿ ಕಾಯ್ದೆ, ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮೂರು ಕೃಷಿ ಕಾಯ್ದೆ, ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

March 16, 2021

ಮೈಸೂರು,ಮಾ.15(ಪಿಎಂ)- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಸಂಬಂಧಿತ ಕಾಯ್ದೆಗಳು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಐಕ್ಯ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ರೈಲ್ವೆ ನಿಲ್ದಾಣದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸದರಿ ಕಾಯ್ದೆಗಳನ್ನು ಹಿಂಪಡೆಯದೇ ತನ್ನ ರೈತ ವಿರೋಧಿ ನಿಲುವಿಗೆ ಬದ್ಧವಾಗಿದೆ ಎಂದು ದೂರಿದರು.

ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸುವ ಮೂಲಕ ದೇಶದ ಜನತೆಯನ್ನು ಶೋಷಣೆ ಮಾಡಲಾಗುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರದ ಅಧೀನದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿರುವುದು ಜನವಿರೋಧಿ ನಡೆಯಾಗಿದೆ ಎಂದು ಖಂಡಿಸಿದರು.

ಕಾರ್ಮಿಕ ಪರವಾಗಿದ್ದ ಕಾಯ್ದೆಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ, ಇದಕ್ಕೆ ಬದಲು ಕಾರ್ಮಿಕ ವಿರೋಧಿಯಾದ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದೆ. ಇದರಿಂದ ಗುತ್ತಿಗೆ ಪದ್ಧತಿ ಹೆಚ್ಚುವ ಮೂಲಕ ಉದ್ಯೋಗ ಭದ್ರತೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಈ ನಾಲ್ಕು ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಮಿತಿ ಮುಖಂಡರಾದ ಕೆ.ಜಿ.ಸೋಮರಾಜೇ ಅರಸ್, ಜಯರಾಂ, ಮರಂಕಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »