ಜûೂಸ್ ಆಫ್ ಕರ್ನಾಟಕ ಆ್ಯಪ್ ಮೂಲಕ ಮೃಗಾಲಯಕ್ಕೆ ಒಂದೇ ದಿನ  8.58 ಲಕ್ಷ ದೇಣಿಗೆ ಸಂಗ್ರಹ
ಮೈಸೂರು

ಜûೂಸ್ ಆಫ್ ಕರ್ನಾಟಕ ಆ್ಯಪ್ ಮೂಲಕ ಮೃಗಾಲಯಕ್ಕೆ ಒಂದೇ ದಿನ 8.58 ಲಕ್ಷ ದೇಣಿಗೆ ಸಂಗ್ರಹ

June 7, 2021

ಮೈಸೂರು, ಜೂ.6(ಎಂಟಿವೈ)-ಲಾಕ್ ಡೌನ್ ಹಿನ್ನೆಲೆಯಲ್ಲಿ ಆದಾಯ ಸಂಗ್ರಹ ವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿರುವ ಮೃಗಾಲಯ ಗಳಿಗೆ ಆರ್ಥಿಕ ನೆರವು ನೀಡುವಂತೆ ನಟ ದರ್ಶನ್ ತೂಗುದೀಪ್ ನೀಡಿದ ಕರೆ ಮೇರೆಗೆ ರಾಜ್ಯದ ವಿವಿಧೆಡೆಯಿಂದ ಪ್ರಾಣಿಪ್ರಿಯರು `ಜûೂಸ್ ಆಫ್ ಕರ್ನಾಟಕ’ ಆ್ಯಪ್ ಮೂಲಕ ಒಂದೇ ದಿನದಲ್ಲಿ 8,58,983 ರೂ. ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.

ಕಳೆದ ವರ್ಷ 6 ತಿಂಗಳಿಗೂ ಹೆಚ್ಚು ಅವಧಿ ಯಲ್ಲಿ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಮುಚ್ಚಲ್ಪಟ್ಟಿ ದ್ದವು. ಈ ಅವಧಿಯಲ್ಲಿ ಪ್ರವಾಸಿಗರ ಪ್ರವೇಶ ವಿಲ್ಲದೆ ಆದಾಯ ಸಂಗ್ರಹಕ್ಕೆ ಕಡಿವಾಣ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳ ಆಹಾರ ಪೂರೈಕೆ, ಸಿಬ್ಬಂದಿಗಳ ವೇತನ ಸೇರಿದಂತೆ ಮೃಗಾಲಯದ ನಿರ್ವಹಣೆಗೆ ಸಂಪನ್ಮೂಲದ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರು ಸಾಕಷ್ಟು ಮಂದಿ ಮೃಗಾಲಯಕ್ಕೆ ದೇಣಿಗೆ ನೀಡುವ ಮೂಲಕ ನೆರವಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಭೈರತಿ ಬಸವರಾಜ್, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ಇನ್ನಿತರರು ಮೃಗಾಲಯದ ನೆರವಿಗೆ ದೇಣಿಗೆ ನೀಡುವ ಮೂಲಕ ವನ್ಯಜೀವಿಗಳ ಮೇಲಿನ ಕಾಳಜಿ ವ್ಯಕ್ತಪಡಿಸಿದ್ದರು.

ಈಗ ಕೊರೊನಾ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ರಾಜ್ಯ ದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ಪ್ರವಾಸಿ ಕ್ಷೇತ್ರಗಳನ್ನು ಬಂದ್ಮಾಡಲಾಗಿದೆ. ಮೃಗಾಲಯಗಳಿಗೂ ಪ್ರವಾಸಿಗರಿಗೆ ಪ್ರವೇಶಾವಕಾಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಆದಾಯದ ಕೊರತೆ ಉಂಟಾಗಿ ಮತ್ತೊಮ್ಮೆ ರಾಜ್ಯದ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಮೃಗಾಲಯಗಳ ಅಧಿಕಾರಿಗಳು ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಅರಣ್ಯ ಇಲಾಖೆಯ ರಾಯಭಾರಿ ನಟ ದರ್ಶನ್ ಅವರಿಂದ ಮೃಗಾಲಯಗಳ ಪ್ರಾಣಿ-ಪಕ್ಷಿಗಳ ಸಂಕಷ್ಟದ ಸ್ಥಿತಿಯನ್ನು ವಿವರಿಸಿ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮನವಿಗೆ ಪ್ರಾಣಿ ಪ್ರಿಯರು ಸ್ಪಂದಿಸಿದ್ದು, ಒಂದೇ ದಿನ 8,58,983 ರೂ.ಗಳನ್ನು 9 ಮೃಗಾಲಯಗಳಿಗೂ ಹಂಚಿಕೆಯಾಗುವಂತೆ ದೇಣಿಗೆ ನೀಡಿದ್ದಾರೆ. ಅದರಲ್ಲಿ ಮೈಸೂರು ಮೃಗಾಲಯಕ್ಕೆ 4,31,309 ರೂ., ಶಿವಮೊಗ್ಗ ಮೃಗಾಲಯಕ್ಕೆ 42,474 ರೂ., ಬೆಳಗಾವಿ ಮೃಗಾಲಯಕ್ಕೆ 10,100 ರೂ., ಕಲ್ಬುರ್ಗಿ ಮೃಗಾಲಯಕ್ಕೆ 15,800 ರೂ., ಗದಗದ ಮೃಗಾಲಯಕ್ಕೆ 26,650 ರೂ., ದಾವಣಗೆರೆ ಮೃಗಾಲಯಕ್ಕೆ 27,950 ರೂ., ಹಂಪಿ ಮೃಗಾಲಯಕ್ಕೆ 43,550 ರೂ., ಚಿತ್ರದುರ್ಗದ ಮೃಗಾಲಯಕ್ಕೆ 14,250 ರೂ., ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 2,46,900 ರೂ. ದೇಣಿಗೆ ಸಂಗ್ರಹವಾಗಿದೆ.

Translate »