ಟಿಪ್ಪರ್ ಹರಿದು ಬೈಕ್  ಸವಾರ ದುರ್ಮರಣ
ಮೈಸೂರು

ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ

March 23, 2021

ಮೈಸೂರು,ಮಾ.22-ಪೊಲೀಸರ ವಾಹನ ತಪಾ ಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿ ರುವ ಘಟನೆ ಮೈಸೂರಿನಲ್ಲಿ ಸೋಮವಾರ ಸಂಜೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳದಲ್ಲಿದ್ದ ಪೊಲೀಸರನ್ನು ಮನಸ್ಸೋ ಇಚ್ಛೆ ಥಳಿಸಿದ್ದಲ್ಲದೆ, ಗರುಡ ವಾಹನವನ್ನು ಉರುಳಿಸಿ, ಜಖಂಗೊಳಿಸಿದ್ದಾರೆ.

ಮೈಸೂರಿನ ಬೋಗಾದಿ-ಹಿನಕಲ್ ಮಾರ್ಗ ಮಧ್ಯೆ ರಿಂಗ್‍ರಸ್ತೆಯಲ್ಲಿ ಆರ್‍ಎಂಪಿ ಕ್ವಾಟ್ರರ್ಸ್ ಸರ್ಕಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೂಲತಃ ಹೆಚ್.ಡಿ.ಕೋಟೆ ತಾಲೂಕು, ಕೆ.ಕನ್ನೇನಹಳ್ಳಿಯ ನಿವಾಸಿ ದೇವರಾಜು(42) ಸ್ಥಳ ದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಸುರೇಶ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಎಎಸ್‍ಐಗಳಿ ಬ್ಬರು ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಸಾರ್ವಜನಿಕರು, ಗರುಡ ವಾಹನ(ಕೆಎ-55, ಜಿ-0430)ವನ್ನು ಉರುಳಿಸಿ, ಜಖಂಗೊಳಿಸಿದ್ದಾರೆ.

ಘಟನೆ ವಿವರ: ಸಿವಿಲ್ ಕಂಟ್ರಾಕ್ಟರ್ ಆಗಿರುವ ದೇವ ರಾಜು, 10 ವರ್ಷದಿಂದ ಬೋಗಾದಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ, ಇಬ್ಬರು ಪುತ್ರರೊಂದಿಗೆ ವಾಸವಿದ್ದರು. ಸೋಮವಾರ ಸಂಜೆ ಪರಿಚಿತ ಸುರೇಶ್ ಅವರೊಂದಿಗೆ ತಮ್ಮ ಬೈಕ್‍ನಲ್ಲಿ ಬೋಗಾದಿಯಿಂದ ಹಿನಕಲ್‍ಗೆ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ದೇವರಾಜು, ಬೈಕ್ ಅನ್ನು ತಕ್ಷಣ ಹಿಂದಿರುಗಿಸಿದರು. ಅಷ್ಟರಲ್ಲಿ ಅಲ್ಲೇ ಮರೆಯಲ್ಲಿ ನಿಂತಿದ್ದ ಮತ್ತೋರ್ವ ಪೊಲೀಸ್ ಪೇದೆ, ದೇವ ರಾಜು ಅವರ ಬೈಕ್ ತಡೆಯಲು ಹೋಗಿದ್ದಾರೆ. ಇದರಿಂದ ಗಾಬರಿಗೊಂಡ ದೇವರಾಜು ಬೈಕ್‍ನೊಂದಿಗೆ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಆಗ ಹಿನಕಲ್ ಕಡೆಗೆ ಬರುತ್ತಿದ್ದ ಟಿಪ್ಪರ್ ದೇವರಾಜು ಅವರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸುರೇಶ್‍ಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರನ್ನು ನೋಡಿದ ದೇವರಾಜು ಬೈಕ್ ಅನ್ನು ಯೂ ಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಮರೆಯಲ್ಲಿ ನಿಂತಿದ್ದ ಸಿಬ್ಬಂದಿ ಲಾಠಿಯಿಂದ ಹೊಡೆದಿದ್ದರಿಂದ ಅವರು ಉರುಳಿಬಿದ್ದರು. ಆಗ ಟಿಪ್ಪರ್ ಹರಿಯಿತು ಎಂದು ಸಾರ್ವಜನಿಕರು ದೂರಿದ್ದಾರೆ.

ರೊಚ್ಚಿಗೆದ್ದ ಜನ: ಪೊಲೀಸರ ತಪಾಸಣೆಯಿಂದಾಗಿ ಅಪಘಾತ ಸಂಭವಿಸಿ, ವ್ಯಕ್ತಿಯೊಬ್ಬ ಮೃತಪಟ್ಟ ವಿಷಯ ತಿಳಿದು, ನೂರಾರು ಜನ ಸ್ಥಳದಲ್ಲಿ ಜಮಾಯಿಸಿ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪೊಲೀಸರು ಸಮಜಾಯಿಷಿ ನೀಡಲು ಮುಂದಾದರಾದರೂ ಜನ ಕೇಳಲಿಲ್ಲ. ಕಳ್ಳರನ್ನು ಹಿಡಿಯುವಂತೆ ಪೊಲೀಸರು ಕದ್ದುಮುಚ್ಚಿ ವಾಹನ ಸವಾರರನ್ನು ತಡೆಯುವುದರಿಂದ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇಂದು ಓರ್ವ ಅಮಾಯಕ ಬಲಿಯಾಗಿದ್ದಾನೆ ಎಂದು ಆಕ್ರೋಶಿತರಾದ ಜನ, ಸಂಚಾರ ಪೊಲೀಸ್ ಎಎಸ್‍ಐ ಹಾಗೂ ಓರ್ವ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು, ಮನಸ್ಸೋ ಇಚ್ಛೆ ಥಳಿಸಿದರು. ಸುತ್ತುವರಿದಿದ್ದ ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರು ಓಡಿ ಹೋಗಬೇಕಾಯಿತು. ಅಷ್ಟಕ್ಕೆ ಬಿಡದ ಸಾರ್ವಜನಿಕರು ಸ್ಥಳದಲ್ಲಿದ್ದ ಪೊಲೀಸರ ಗರುಡ ವಾಹನದ ಮೇಲೆ ದಾಳಿ ನಡೆಸಿ, ಅದರ ಮೇಲೆ ಬ್ಯಾರಿಕೇಡ್ ಎಸೆದು, ಕೊನೆಗೆ ಅದನ್ನು ಎತ್ತಿ ಉರುಳಿಸಿ, ಜಖಂಗೊಳಿಸಿದ್ದಾರೆ. ವಾಹನ ತಪಾಸಣೆಯಲ್ಲಿದ್ದ ಇನ್ನೂ ಮೂವರು ಸಿಬ್ಬಂದಿಗೂ ಜನ ಥಳಿಸಿದ್ದಾರೆ.

ನೂರಾರು ಜನ ರಿಂಗ್ ರಸ್ತೆಯಲ್ಲಿ ಜಮಾಯಿಸಿದ್ದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿತ್ತಲ್ಲದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ವಿಜಯನಗರ ಠಾಣೆ ಪೊಲೀಸರು, ಉದ್ರಿಕ್ತರನ್ನು ಚದುರಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ದೇವರಾಜು ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ವಿವಿ ಪುರಂ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ಹಾಗೂ ನಂತರದಲ್ಲಿ ನಡೆದ ಗಲಾಟೆ, ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »