ನಾಳಿನ `ಭಾರತ್ ಬಂದ್’ಗೆ  ಲಾರಿ ಮಾಲೀಕರ ಬೆಂಬಲ
ಮೈಸೂರು

ನಾಳಿನ `ಭಾರತ್ ಬಂದ್’ಗೆ ಲಾರಿ ಮಾಲೀಕರ ಬೆಂಬಲ

September 26, 2021

ಮೈಸೂರು,ಸೆ.25(ಎಂಟಿವೈ)-ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆ ಯಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ `ಭಾರತ್ ಬಂದ್’ಗೆ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಮತ್ತು ಮೈಸೂರು-ಚಾಮರಾಜನಗರ ಲಾರಿ ಮಾಲೀಕರು ಬೆಂಬಲ ಸೂಚಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ಯಲ್ಲಿ ರೈಲ್ವೆ ಗೂಡ್ಸ್ ಲಾರಿ ಮಾಲೀ ಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಇಂಧನ, ಟ್ಯಾಕ್ಸ್ ಬೆಲೆ ಹೆಚ್ಚಳದಿಂದ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ವಿಮೆ, ಅನಗತ್ಯ ಟ್ಯಾಕ್ಸ್‍ಗಳ ಮೂಲಕ ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ಇದರ ಜೊತೆಗೆ ರೈತನಿಗೆ ಮಾರಕವಾಗುವಂತೆ ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದೇಶದ ಬೆನ್ನೆಲುಬನ್ನು ಮುರಿಯಲು ಸಂಚು ನಡೆಸು ತ್ತಲೇ ಇದ್ದಾರೆ. ಲಕ್ಷಾಂತರ ರೈತರು ನವದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಎಲ್ಲಾ ಸಂಘಟನೆಗಳು, ಪ್ರತಿಯೊಬ್ಬ ಪ್ರಜೆಯೂ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದರು.
ಮೈಸೂರು-ಚಾಮರಾಜನಗರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ವಿಶ್ವನಾಥ್ ಮಾತನಾಡಿ, ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಸೂಚಿಸಿದ್ದು, ರೈತರೊಂದಿಗೆ ಪ್ರತಿಭಟನೆಗೆ ಮಾಡುತ್ತೇವೆ ಎಂದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಗಳನ್ನು ಖಂಡಿಸಿದರು. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ಗ್ರಾಮದಲ್ಲಿ ಸಾವು-ನೋವುಗಳು ಸಂಭವಿಸಿದಾಗ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸುವಂತೆ ರೈತರು ಕರೆ ನೀಡಿರುವ ಈ ಹೋರಾಟಕ್ಕೆ ಬೆಂಬಲ ನೀಡಬೇಕು. ಸೆ.27ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದ ನಾನಾ ಸಂಘಟನೆಗಳು ಗನ್ ಹೌಸ್ ವೃತ್ತದಲ್ಲಿ ಸಮಾವೇಶಗೊಂಡು. ಆ ನಂತರ ಬೃಹತ್ ಸಂಖ್ಯೆಯ ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಕೃಷಿ ಹಾಗೂ ರೈತರಿಗೆ ಮಾರಕವಾದ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ, ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಶೇಖರ್, ಶಿರಮಳ್ಳಿ ಮಂಜುನಾಥ್, ಪೈಲ್ವಾನ್ ವೇಣುಗೋಪಾಲ್ ಇದ್ದರು.

Translate »