ಕೋವಿಡ್-19ಗೆ ಕಡಿವಾಣ ಹಾಕಲು ಇಂದಿನಿಂದ ಜುಲೈ 24ರವರೆಗೆ ಮೈಸೂರಿನ ಎನ್‍ಆರ್, ಉದಯಗಿರಿ, ಲಷ್ಕರ್, ಮಂಡಿ ಠಾಣಾ ವ್ಯಾಪ್ತಿ ನಿರ್ಬಂಧಿತ ಪ್ರದೇಶ
ಮೈಸೂರು

ಕೋವಿಡ್-19ಗೆ ಕಡಿವಾಣ ಹಾಕಲು ಇಂದಿನಿಂದ ಜುಲೈ 24ರವರೆಗೆ ಮೈಸೂರಿನ ಎನ್‍ಆರ್, ಉದಯಗಿರಿ, ಲಷ್ಕರ್, ಮಂಡಿ ಠಾಣಾ ವ್ಯಾಪ್ತಿ ನಿರ್ಬಂಧಿತ ಪ್ರದೇಶ

July 17, 2020

ಮೈಸೂರು, ಜು.16(ಎಂಕೆ)- ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ನರಸಿಂಹರಾಜ, ಉದಯ ಗಿರಿ, ಲಷ್ಕರ್ ಹಾಗೂ ಮಂಡಿಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ನಾಳೆ (ಶುಕ್ರ ವಾರ) ಬೆಳಗ್ಗೆ 6 ಗಂಟೆಯಿಂದ ಜುಲೈ 24ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧಿತ ಪ್ರದೇಶ ವೆಂದು ಘೋಷಿಸಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದ ಕೋವಿಡ್-19 ಸೋಂಕು ಪ್ರಕರಣಗಳು ಪ್ರತಿ ದಿನ 100ಕ್ಕೂ ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬಹುತೇಕ ಎನ್.ಆರ್.ಕ್ಷೇತ್ರ ಹಾಗೂ ಅದಕ್ಕೆ ಹೊಂದಿ ಕೊಂಡಂತಿರುವ ಚಾಮರಾಜ ಕ್ಷೇತ್ರದ ಕೆಲವು ಬಡಾವಣೆಗಳಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.

ನಿರ್ಬಂಧ: ಎಲ್ಲಾ ರೀತಿಯ ಹೋಟೆಲ್, ಟಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹೋಟೆಲ್ ಮತ್ತು ರೆಸ್ಟೋರೆÀಂಟ್‍ಗಳಿಂದ ಹೋಂ ಡೆಲಿವರಿಗೆ ಅವಕಾಶವಿರುತ್ತದೆ. ಆಹಾರ, ದಿನಸಿ ಅಂಗಡಿ ಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣಿನ ಅಂಗಡಿಗಳು, ಔಷಧೋಪಚಾರ, ಬ್ಯಾಂಕ್‍ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ, ಎಲ್ಲಾ ತರಹದ ಇತರ ವಾಣಿಜ್ಯ ವಹಿವಾಟುಗಳನ್ನು ನಿರ್ಬಂಧಿಸ ಲಾಗಿದೆ. ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು ಮಂಗಳವಾರ ಮತ್ತು ಶುಕ್ರವಾರ ಮಾತ್ರ ತೆರೆಯತಕ್ಕದ್ದು. ಎಲ್ಲಾ ಧರ್ಮಗಳ ಪ್ರಾರ್ಥನಾ ಮತ್ತು ಹಬ್ಬಗಳ ಒಗ್ಗೂಡುವಿಕೆಗೆ ಅವಕಾಶವಿಲ್ಲ. ಪ್ರಾರ್ಥನಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ವನ್ನು ನಿಷೇಧಿಸಲಾಗಿದೆ. ಈಗಾಗಲೇ ನಿಗದಿಪಡಿಸಲಾದ ಮದುವೆಗಳು ಮತ್ತು ಇತರ ಸಮಾರಂಭಗಳನ್ನು (50 ಜನ ಮೀರದಂತೆÀ) ಮಾತ್ರ ಸರ್ಕಾರದ ನಿಯಮಾವಳಿಯಂತೆ ನಡೆಸಬಹುದಾಗಿದೆ. ನಿರ್ಬಂಧಿತ ಪ್ರದೇಶಗಳ ಮೂಲಕ ಹಾದು ಹೋಗುವ ಸಾರ್ವಜನಿಕರಿಗೆ ಹಾಗೂ ಇತರ ಕಡೆ ಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳಿಯರಿಗೆ ಪ್ರಯಾಣಿಸಲು ನಿರ್ಬಂಧ ವಿರುವುದಿಲ್ಲ, ಆದರೆ ಅನವಶ್ಯಕವಾಗಿ ಓಡಾಡುವು ದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.

6 ಬಡಾವಣೆಯಲ್ಲಿ ಸಂಪೂರ್ಣ ಲಾಕ್‍ಡೌನ್ 

ಮೊದಲನೇ ಹಂತದಲ್ಲಿ ಮುನೇಶ್ವರ ನಗರ, ಕೆ.ಹೆಚ್.ಬಿ ಕಾಲೋನಿ, ಉದಯಗಿರಿ, ರಾಜೀವ್ ನಗರ, ಬೀಡಿ ಕಾಲೋನಿ ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತ – ಮುತ್ತಲಿನ 400 ಮೀಟರ್ ಸುತ್ತಳತೆ ವ್ಯಾಪ್ತಿಯನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು. ಲಾಕ್‍ಡೌನ್ ಪ್ರದೇಶಗಳಲ್ಲಿರುವ ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣು ಅಂಗಡಿ ಗಳನ್ನು ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ತೆರೆÉಯಬಹುದಾಗಿರುತ್ತದೆ. ಸಂಪೂರ್ಣ ಲಾಕ್‍ಡೌನ್ ಪ್ರದೇಶದಲ್ಲಿ ಗುರುತಿನ ಚೀಟಿ ಹೊಂದಿರುವ ಖಾಯಂ, ಹೊರಗುತ್ತಿಗೆ ಸರ್ಕಾರಿ ನೌಕರರನ್ನು ಹೊರತು ಪಡಿಸಿ, ಇತರೆ ಯಾರಿಗೂ ಸಹ ಓಡಾಡಲು ಅವಕಾಶ ವಿರುವುದಿಲ್ಲ. ಪ್ರತಿ ದಿನ ಮನೆಯಲ್ಲಿರುವ ಎಲ್ಲ ವ್ಯಕ್ತಿಗಳನ್ನೂ ಸಹ ತಪಾಸಣೆಗೆ ಒಳಪಡಿಸಿ, ಅವಶ್ಯಕತೆ ಇದ್ದಲ್ಲಿ ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ದ್ರವ ಪರೀಕ್ಷೆ ನಡೆಸಲು ಹಾಗೂ ಸೋಂಕು ಕಂಡು ಬಂದಲ್ಲಿ ತಕ್ಷಣವೇ ಆಂಬುಲೆನ್ಸ್ ಮೂಲಕ ಸೂಕ್ತ ಸ್ಥಳಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೊದಲನೆ ಹಂತದಲ್ಲಿ ಕೋವಿಡ್ ಸೋಂಕು ತಪಾಸಣಾ ಕಾರ್ಯಕ್ಕಾಗಿ ಕನಿಷ್ಟ 400 ರ್ಯಾಪಿಡ್ ಆ್ಯಂಟಿಜನ್ ಕಿಟ್ ಗಳನ್ನು ಮೀಸಲಿರಿಸಲು ಹಾಗೂ ತಪಾಸಣಾ ತಂಡಕ್ಕೆ ಕೂಡಲೇ ಹಸ್ತಾಂತರಿಸಲು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ರವಿ ಅವರಿಗೆ ಸೂಚಿಸಲಾಗಿದೆ.

ಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣ ಹೊಂದಿದ ಸೋಂಕಿತರನ್ನು ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಲ್ಲಿ (ಕೋವಿಡ್ ಕೇರ್ ಸೆಂಟರ್) ಪ್ರತ್ಯೇಕಿಸುವುದು. ಸ್ಥಳೀಯವಾಗಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ಧತೆಯನ್ನು ಮಾಡಲು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

 

 

Translate »