ರೈತರ ಆದಾಯ ವೃದ್ಧಿಗಾಗಿ  ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ
ಮೈಸೂರು

ರೈತರ ಆದಾಯ ವೃದ್ಧಿಗಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ

December 27, 2021

ಮೈಸೂರು,ಡಿ.26(ಎಸ್‍ಬಿಡಿ)-ರೈತರ ಆದಾಯ ವೃದ್ಧಿಗೆ ಪೂರಕವಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶ ಹಾಗೂ ಕುರುಬೂರು ಶಾಂತಕುಮಾರ್ ಅವರ 4 ದಶಕಗಳ ಹೋರಾ ಟಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ಮಹತ್ವದ ಘೋಷಣೆ ಮಾಡಿದರು.

ಎಲ್ಲಾ ರಾಜಕೀಯ ಪಕ್ಷಗಳೂ ರೈತರಿಗೆ ಸೇರಿದ್ದು, ಅವರೇ ಎಲ್ಲಾ ಪಕ್ಷಗಳ ಬೆನ್ನೆಲುಬು’ ಎಂಬ ಕಟು ಸತ್ಯವನ್ನು ಎಲ್ಲರೂ
ಒಪ್ಪಿಕೊಳ್ಳಬೇಕು. ಇದನ್ನು ಒಪ್ಪಿದರೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಕಲ್ಯಾಣ ಸಾಧ್ಯ. ಆದರೆ ಸ್ವಾತಂತ್ರ್ಯ ಪಡೆದು 75 ವರ್ಷವಾದರೂ ಇದು ಸಾಧ್ಯವಾಗಿಲ್ಲ. ಚಳವಳಿ ಹಾಗೂ ರಾಜಕಾರಣದ ನಡುವೆ ಒಳ್ಳೆಯ ಸಂಬಂಧ ಸಾಧ್ಯವಾಗಬೇಕು. ಆಹಾರ ಉತ್ಪಾದನೆ ಬಗ್ಗೆ ತೋರುವ ಕಾಳಜಿಯನ್ನು ರೈತರ ಮೇಲೆ ತೋರುವುದಿಲ್ಲ. ಪರಿಣಾಮ ಉತ್ಪನ್ನ ಮಾರಾಟಗಾರರ ಕೈ ತುಂಬಿದರೂ ರೈತರ ಜೇಬು ಖಾಲಿ ಇದೆ. ರೈತರ ಆರ್ಥಿಕ ಸ್ಥಿತಿ ಉತ್ತಮವಾದರೆ ಕೃಷಿ ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥ ಅಶೋಕ್ ದಳವಾಯಿ ಅವರು ನೀಡಿರುವ ಮಾಹಿತಿಯನ್ನು ಪರಿಶೀಲಿಸಲಾಗಿದೆ. ರೈತರ ಆದಾಯ ವೃದ್ಧಿಸುವ ಗುರಿಗೆ ಸರ್ಕಾರ ಬದ್ಧವಾಗಿದ್ದು, ಪೂರಕವಾದ ನಿರ್ದೇಶನಾಲಯ ಜಾರಿಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾನಿಧಿ ವಿಸ್ತರಣೆ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ ನೆರವಾಗಿದೆ. ಸದ್ಯ 2.40 ಲಕ್ಷ ವಿದ್ಯಾರ್ಥಿಗಳು ಯೋಜನೆಯ ಅನುಕೂಲ ಪಡೆಯುತ್ತಿ ದ್ದಾರೆ. ಗ್ರಾಮಾಂತರ ಭಾಗದಲ್ಲಿ ಕಾರಣಾಂತರದಿಂದ ಹೆಣ್ಣುಮಕ್ಕಳು ವಿಧ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಬಾರದು ಎಂಬ ಉದ್ದೇಶದಿಂದ ಕೃಷಿಕ ಕುಟುಂಬದ ಹೈಸ್ಕೂಲ್ ಹೆಣ್ಣುಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಸೂಚಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಯೋಜನೆಗೊಳಪಡಿಸ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಡಬ್ಲ್ಯೂಟಿಓ ಹೊಡೆತ: ಬೆಲೆ ನಿಯಂತ್ರಣ ಹಾಗೂ ಬೆಲೆ ನಿಗದಿ ದೊಡ್ಡ ಸಮಸ್ಯೆ ಆಗಿದೆ. ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಓ)ಯಲ್ಲಿ ಸಹಿ ಮಾಡಿದಾಗಲೇ ನಮ್ಮ ಹಣೆ ಬರಹವನ್ನು ಅವರ ಕೈಗೆ ಕೊಟ್ಟಂತಾಗಿದೆ. ಮುಕ್ತ ಮಾರುಕಟ್ಟೆಗೆ ಅವಕಾಶವಿದೆ, ಆದರೆ ಬೆಲೆ ನಿಗದಿಗೊಳಿಸುವ ಅಧಿಕಾರ ಕಳೆದುಕೊಂಡಿದ್ದೇವೆ. ಎಪಿಎಂಸಿ ಕಾಯ್ದೆಗೂ ಮುನ್ನವೇ ಖಾಸಗಿ ಮಾರುಕಟ್ಟೆ ಹೆಜ್ಜೆ ಇಟ್ಟಿತ್ತು. 2007ರಲ್ಲೇ ರಿಲಯನ್ಸ್, ಮೆಟ್ರೋ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಬಂದವು. ಆದರೆ ಜಾಗತಿಕ ವ್ಯಾಪಾರ ನಿಮಯಗಳ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸಲಿಲ್ಲ. ರೈತರು ಹಣಕಾಸಿನ ಕೊರತೆ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿ ಗ್ರಾಮೀಣ ಸಾಲ ನೀತಿ ಸುಧಾರಣೆ ಹಾಗೂ ಸಮಗ್ರ ಕೃಷಿಗೆ ಉತ್ತೇಜನದ ಜೊತೆಗೆ ಅಂತಾರಾಷ್ಟ್ರೀಯ ನೀತಿ-ನಿಯಮಗಳಿಂದ ಹೊರಗೆ ಬಂದರೆ ರೈತರ ಕಲ್ಯಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ತ್ವರಿತ ಪರಿಹಾರ: ಈ ಸಾಲಿನಲ್ಲಿ ಅಕಾಲಿಕ ಮಳೆಯಿಂದಾಗಿ 12 ಲಕ್ಷ ಹೆಕ್ಟೇರ್‍ಗಿಂತ ಹೆಚ್ಚು ಬೆಳೆ ನಷ್ಟವಾಗಿದೆ. ಕೇಂದ್ರದ ಪರಿಹಾರ ಮೊತ್ತದೊಂದಿಗೆ ರಾಜ್ಯ ಸರ್ಕಾರದ ನೆರ ವನ್ನೂ ಸೇರಿಸಿ ದುಪ್ಪಟ್ಟು ಪರಿಹಾರ ಘೋಷಿಸ ಲಾಗಿದೆ. ಹಿಂದೆ 6 ತಿಂಗಳಾದರೂ ಬೆಳೆನಷ್ಟ ಪರಿಹಾರ ರೈತರ ಕೈ ಸೇರುತ್ತಿರಲಿಲ್ಲ. ಆದರೆ ಈಗ ಯಾವುದೇ ರೀತಿಯಲ್ಲೂ ವಿಳಂಬ ವಾಗದಂತೆ ಒಂದು ತಿಂಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಸಂದಾಯವಾಗುತ್ತದೆ. ಸದ್ಯ ಒಂದು ತಿಂಗಳಲ್ಲೇ 800 ಕೋಟಿ ರೂ. ಪರಿಹಾರ ವಿತರಿಸಿದ್ದು, ಮುಂದಿನ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೂ ಸಿಗಲಿದೆ. ರೈತಪರ, ಸಂವೇದನಾ ಶೀಲ ಸರ್ಕಾರ, ನಿಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂದು ಹೇಳಿದರು.

`ರೈತರತ್ನ’-ಅಭಿನಂದನೆ: ಸಮಾರಂಭದಲ್ಲಿ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್ ಅವರಿಗೆ `ರೈತ ರತ್ನ’ ಬಿರುದು ನೀಡಿ, ಶ್ರೀಮತಿ ಪದ್ಮ ಶಾಂತ ಕುಮಾರ್ ಅವರೊಂದಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ಇದೇ ವೇಳೆ ಗದಗದ ರೈತ ಹೋರಾಟಗಾರ ವೀರನಗೌಡ ಕೋ ಪಾಟೀಲ್ ಮತ್ತಿತರರು ಕುರುಬೂರು ಶಾಂತಕುಮಾರ್‍ಗೆ ಬೆಳ್ಳಿಗೆ ಕಿರೀಟ ತೊಡಿಸಿ, ಅಭಿನಂದಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾಷಣದ ವೇಳೆ ಕುರುಬೂರು ಶಾಂತಕುಮಾರ್ ಅವರ ಹೋರಾಟ ಸ್ಮರಿಸಿ, ಶುಭಕೋರಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಕೇಂದ್ರ ಕೃಷಿ ಮತ್ತು ಕಲ್ಯಾಣ ಇಲಾಖೆ ಕಾರ್ಯದರ್ಶಿಯೂ ಆದ ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥ ಅಶೋಕ್ ದಳವಾಯಿ, ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಎಸ್.ಶಿವರಾಜಪ್ಪ, ಗೌರವಾಧ್ಯಕ್ಷ ಟಿ.ವಿ.ಗೋಪಿನಾಥ, ರಾಷ್ಟ್ರೀಯ ಅರಶಿನ ಬೆಳೆಗಾರರ ಸಂಘದ ಅಧ್ಯಕ್ಷ ದೈವ ಶಿಗಾಮಣಿ, ಹಿರಿಯ ಪತ್ರಕರ್ತರಾದ ಹೆಚ್.ಆರ್.ರಂಗನಾಥ್, ರವಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಸಿಎಂಗೆ ಮನವಿ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ `ರಂಗಾಯಣ ಉಳಿಸಿ’ ಹೋರಾಟಗಾರರು ಕಲಾಮಂದಿರ ಹೊರ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿ, ಆಗ್ರಹಿಸಿದರು.

Translate »