ಬೆಂಗಳೂರು, ಜು. 1(ಕೆಎಂಶಿ)-ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಠ ಪಕ್ಷ ಚಾಮರಾಜನಗರ ಆಕ್ಸಿ ಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇ ಇದೆ.
ನಿನ್ನೆ ಕೂಡ ಸುಪ್ರೀಂಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿ ಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಚಾಮರಾಜನಗರ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದು ವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿ ಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರ ಯಾಕಿರ ಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಾ ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ. ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದು ಕೊಳ್ಳಲಿಲ್ಲ. ಕೊರತೆ ಇದ್ದ ಕಾರಣ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ. ನಾನು ಚಾಮ ರಾಜನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡರು.
ರಾಜ್ಯ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್‍ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ.