ಕಾರ್ಮಿಕ ಇಲಾಖೆ ದರಪಟ್ಟಿಯಂತೆ ಕೂಲಿ ನೀಡಲು ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ
ಮೈಸೂರು

ಕಾರ್ಮಿಕ ಇಲಾಖೆ ದರಪಟ್ಟಿಯಂತೆ ಕೂಲಿ ನೀಡಲು ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ

January 28, 2021

ಮೈಸೂರು,ಜ.27(ಪಿಎಂ)-ಕಾರ್ಮಿಕ ಇಲಾಖೆ ನಿಗದಿ ಪಡಿಸಿರುವ ದರಪಟ್ಟಿಯಂತೆ ಕೂಲಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರ ಹಿಸಿ ಅರಣ್ಯ ಇಲಾಖೆಯ ಮೈಸೂರು ವೃತ್ತ ಕಚೇರಿ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹಾಗೂ ಕ್ಷೇಮಾಭಿವೃದ್ಧಿ ನೌಕರರ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅಶೋಕಪುರಂನಲ್ಲಿರುವ ಅರಣ್ಯ ಇಲಾಖೆಯ ಅರಣ್ಯ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕಾರ್ಮಿಕ ಇಲಾಖೆ ಆಯುಕ್ತರು ಪ್ರತಿ ವರ್ಷ ಗ್ರಾಹಕ ಬೆಲೆ ಸೂಚ್ಯಂಕದಂತೆ ಕನಿಷ್ಠ ವೇತನ ಕಾಯ್ದೆಯಡಿ ದರ ನಿಗದಿ ಪಡಿಸುತ್ತಾರೆ. ಇದರ ಅನುಸಾರ ಎಲ್ಲಾ ಇಲಾಖೆಗಳು ವೇತನ ನೀಡಬೇಕು. ನಮಗೆ ಇದರ ಅನುಸಾರ ವೇತನ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ಸಾಮಾ ಜಿಕ ಭದ್ರತೆಯಡಿ ಕಾರ್ಮಿಕ ಭವಿಷ್ಯನಿಧಿ ಹಾಗೂ ಆರೋಗ್ಯ ವಿಮೆ ಸೌಲಭ್ಯ ನೀಡುತ್ತಿಲ್ಲ. ಗುತ್ತಿಗೆ ಹೆಸರಿನಲ್ಲಿ ನೌಕರರಿಗೆ ವಂಚಿಸಲಾಗುತ್ತಿದೆ ಎಂದು ದೂರಿದರು.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು, ಕಾರ್ಮಿಕ ಇಲಾಖೆಯ ದರಪಟ್ಟಿಯಂತೆ ದಿನಕ್ಕೆ 495 ರೂ. ಕೂಲಿ ನೀಡಬೇಕು. ಆದರೆ ಅರಣ್ಯ ವೀಕ್ಷಕ ಹಾಗೂ ಕಾವಲುಗಾರ ಹುದ್ದೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುವವರಿಗೆ ಕೇವಲ 200ರಿಂದ 300 ರೂ. ವರೆಗೆ ಕೂಲಿ ನೀಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬ ದಿನಗೂಲಿ ನೌಕರರಿಗೆ ಮಾಸಿಕ ವಾಗಿ ಸುಮಾರು 5 ಸಾವಿರ ರೂ. ವಂಚನೆಯಾಗುತ್ತಿದೆ ಎಂದು ಆರೋಪಿಸಿದರು. ಯಾವುದೇ ದಿನಗೂಲಿ ನೌಕರರ ಹೆಸರಿನಲ್ಲಿ ದಾಖಲಾತಿಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಹಾಜರಾತಿ ನಿರ್ವಹಣೆ ಮಾಡದೇ ಇವರು ಕೆಲಸ ಮಾಡಿ ರುವುದಕ್ಕೆ ಯಾವುದೇ ದಾಖಲೆ ಇಲ್ಲದಂತೆ ಆಗಿದೆ. 15ರಿಂದ 20 ವರ್ಷಗಳು ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರ ರನ್ನು ಇದೀಗ ಹೊರ ಗುತ್ತಿಗೆಯಡಿ ಕೆಲಸ ಮಾಡಿಸಲಾಗು ತ್ತಿದೆ. ದಿನಗೂಲಿ ನೌಕರರನ್ನು ಗುತ್ತಿಗೆಗೆ ಬದಲಾವಣೆ ಮಾಡುವ ಮೂಲಕ ಅವರ ಉದ್ಯೋಗದ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ದೂರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್.ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ನಿಂಗರಾಜು ಸೇರಿದಂತೆ ದಿನಗೂಲಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »