ಕೊರೊನಾ ಹರಡುವಿಕೆ ತಡೆಯಲು  ಮೈಸೂರಿನ ಮಾರುಕಟ್ಟೆಗಳು ಬಂದ್
ಮೈಸೂರು

ಕೊರೊನಾ ಹರಡುವಿಕೆ ತಡೆಯಲು ಮೈಸೂರಿನ ಮಾರುಕಟ್ಟೆಗಳು ಬಂದ್

May 3, 2021

ಮೈಸೂರು,ಮೇ2(ಎಂಟಿವೈ)-ಜನಜಂಗುಳಿ ಹೆಚ್ಚಾಗಿ ಕೊರೊನಾ ಸೋಂಕು ಹರಡುವಿಕೆ ಆತಂಕದಿಂದ ಸರ್ಕಾರದ ಆದೇಶದ ಮೇರೆಗೆ ಭಾನುವಾರದಿಂದ ಮೈಸೂರಿನ ದೇವರಾಜ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಯನ್ನು ಮೈಸೂರು ನಗರ ಪಾಲಿಕೆ ಹಾಗೂ ಪೊಲೀಸರು ಬಂದ್ ಮಾಡಿಸಿದ್ದಾರೆ.

ಕೊರೊನಾ 2ನೇ ಅಲೆ ತೀವ್ರಗೊಂಡಿದ್ದು, ಕಳೆದೊಂದು ತಿಂಗ ಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವುದಲ್ಲದೆ ಸಾವಿಗೀಡಾ ಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದ ನಂತರ 14 ದಿನ ಕೋವಿಡ್ ಕಫ್ರ್ಯೂ ಜಾರಿಗೊಳಿಸಿದೆ. ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ವಿನಾಯಿತಿ ನೀಡಲಾಗಿತ್ತು. ಮೈಸೂರು, ಬೆಂಗಳೂರು, ಕಲಬುರ್ಗಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ತರಕಾರಿ-ಹಣ್ಣು ಖರೀದಿಗಾಗಿ ಜನತೆ ಮುಗಿಬೀಳುತ್ತಿದ್ದ ಹಿನ್ನೆಲೆ ಯಲ್ಲಿ ಕೊರೊನಾ ಸೋಂಕು ಹರಡುವ ಹಾಟ್‍ಸ್ಪಾಟ್‍ಗಳಾಗಿ ರೂಪುಗೊಳ್ಳುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಮೇ1ರಂದು ಕೋವಿಡ್-19 ಮಾರ್ಗಸೂಚಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಸಂತೆ, ಜಾತ್ರೆಯನ್ನು ನಿಷೇಧಿಸಲಾಗಿದೆ. ಅದೇ ಮಾದರಿಯಲ್ಲಿ ಹೆಚ್ಚು ಜನಸಂದಣಿ ಉಂಟಾಗುವ ಮಾರು ಕಟ್ಟೆಗೂ ಸರ್ಕಾರದ ಬಂದ್ ಮಾಡುವಂತೆ ಆದೇಶಿಸಿದೆ.

ನಾಲ್ಕು ಮಾರುಕಟ್ಟೆ ಬಂದ್: ಮೈಸೂರಿನ ದೇವರಾಜ ಮಾರು ಕಟ್ಟೆ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಗಳು ಸಂತೇ ಮಾದರಿಯಲ್ಲೇ ನಡೆಯುವುದರಿಂದ ಹಾಗೂ ಜನ ಜಂಗುಳಿ ಹೆಚ್ಚಾಗಿ ಸೇರುವುದರಿಂದ ಮೈಸೂರು ಮಹಾನಗರ ಪಾಲಿಕೆ ಈ ಮಾರುಕಟ್ಟೆಯನ್ನು ಬಂದ್ ಮಾಡಿ ಸಲು ಮುಂದಾಗಿದೆ. ಸರ್ಕಾರದ ಆದೇಶದ ಮೇರೆಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾರುಕಟ್ಟೆ ಬಂದ್ ಮಾಡಿಸುವ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರೊಂದಿಗೆ ಚರ್ಚಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯೇ ದೇವರಾಜ ಮಾರುಕಟ್ಟೆಯನ್ನು ಬಂದ್ ಮಾಡಿಸಲಾಯಿತು.

ಇಂದಿನಿಂದ ಮತ್ತಷ್ಟು ಬಿಗಿ ಕ್ರಮ: ಮಾರುಕಟ್ಟೆಗಳಲ್ಲಿ ಜನಸಂದಣಿ ತಪ್ಪಿಸಲು ಹಾಗೂ ಮಾರಾಟಕ್ಕೆ ತಡೆಯೊಡ್ಡಲು ನಾಳೆಯಿಂದ (ಮೇ.3) ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸರ್ಕಾರ ಹೊರಡಿ ಸಿರುವ ಆದೇಶದಲ್ಲಿ ಮಾರುಕಟ್ಟೆಗೆ ವಿನಾಯಿತಿ ನೀಡದ ಹಿನ್ನೆಲೆ ಯಲ್ಲಿ ಜನಸಂದಣಿ ಸೇರಲು ಅವಕಾಶ ನೀಡದಿರುವುದಕ್ಕೆ ಪಾಲಿಕೆ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಮುಂದಿನ ಆದೇಶದವ ರೆಗೂ ದೇವರಾಜ ಮಾರುಕಟ್ಟೆ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಗಳು ಬಂದ್ ಆಗಲಿವೆ.

ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ: ಮೈಸೂರು ಮಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಕಳೆದ ರಾತ್ರಿ ಹೊರಡಿಸಿರುವ ಆದೇಶದಲ್ಲಿ ಸಂತೆ, ಜಾತ್ರೆ ಹಾಗೂ ಸಂತೆ ಮಾದರಿಯಲ್ಲಿ ನಡೆಯುವ ಮಾರುಕಟ್ಟೆಯನ್ನು ಬಂದ್ ಮಾಡಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ದೇವರಾಜ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ. ರಸ್ತೆಯ ಮಾರುಕಟ್ಟೆಯನ್ನು ಬಂದ್ ಮಾಡಿಸಲಾಗುತ್ತಿದ್ದು, ಮುಂದಿನ ಆದೇಶದವರೆಗೂ ಮಾರುಕಟ್ಟೆಗಳು ಬಂದ್ ಮಾಡಿಸಲಾಗುತ್ತದೆ. ಆದರೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಬಹುದಾಗಿದೆ. ಒಂದೇ ಕಡೆ ಕೇಂದ್ರೀಕೃತ ವಾಗುವುದಕ್ಕೆ ಅವಕಾಶವಿಲ್ಲ. ಮೈಸೂರಿಗರಿಗೆ ಬೇಕಾದ ತರಕಾರಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ವ್ಯಾಪಾರಿಗಳು ಆಯಾ ಬಡಾವಣೆಗಳಲ್ಲೇ ಮಾರಾಟ ಮಾಡಬಹುದು. ಸೋಂಕು ಹರಡುವಿಕೆ ತಡೆಗಟ್ಟುವುದರೊಂದಿಗೆ ವ್ಯಾಪಾರಿಗಳು, ಗ್ರಾಹಕರ ಹಿತಕಾಯುವ ನಿಟ್ಟಿನಲ್ಲಿ ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದರೊಂದಿಗೆ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಓಡಾಡದೆ ಕಫ್ರ್ಯೂ ನಿಯಮವನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

ಗೇಟ್‍ಗೆ ಬೀಗ ಹಾಕಿದ ಪೊಲೀಸರು: ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆ ಮಾಡಿದ ಮನವಿ ಮೇರೆಗೆ ಇಂದು ಬೆಳಗ್ಗೆ ದೇವರಾಜ ಠಾಣೆಯ ಪೊಲೀಸರು ಎಲ್ಲಾ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರಲ್ಲದೆ, ಗ್ರಾಹಕರು ಮಾರುಕಟ್ಟೆಗೆ ಪ್ರವೇಶಿಸದಂತೆ ಮಾರುಕಟ್ಟೆಯ ಎಲ್ಲಾ ದ್ವಾರಗಳಿಗೂ ಬೀಗ ಹಾಕಿದರು.

Translate »