ಮಕ್ಕಳ ಪ್ರತ್ಯೇಕ ಆಸ್ಪತ್ರೆ ಆರಂಭಿಸಲು,  ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯಿಸಿ ಕಾಂಗ್ರೆಸ್‍ನಿಂದ ಅಂಚೆಪತ್ರ ಚಳವಳಿ
ಮೈಸೂರು

ಮಕ್ಕಳ ಪ್ರತ್ಯೇಕ ಆಸ್ಪತ್ರೆ ಆರಂಭಿಸಲು, ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯಿಸಿ ಕಾಂಗ್ರೆಸ್‍ನಿಂದ ಅಂಚೆಪತ್ರ ಚಳವಳಿ

June 29, 2021

ಮೈಸೂರು,ಜೂ.28(ಪಿಎಂ)- ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆ ಯಲ್ಲಿ ಮಕ್ಕಳ ಪ್ರತ್ಯೇಕ ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಹಾಗೂ 2 ತಿಂಗಳ ವಸತಿ ವಿದ್ಯುತ್ ಶುಲ್ಕ ಮನ್ನಾ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಂಚೆಪತ್ರ ರವಾನಿಸುವ ಮೂಲಕ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸೋಮವಾರ ಚಳವಳಿ ನಡೆಸಲಾಯಿತು.

ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಅಂಚೆ ಪೆಟ್ಟಿಗೆಗೆ ಪತ್ರಗಳನ್ನು ಮಕ್ಕಳು ಹಾಕುವ ಮೂಲಕ ಚಳುವಳಿಗೆ ಚಾಲನೆ ನೀಡಿದರು. ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡುವ ಜೊತೆಗೆ ಮಕ್ಕಳಿಗೆ ಲಸಿಕೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು. ಲಾಕ್‍ಡೌನ್‍ನಿಂದ ಸಾರ್ವಜನಿಕರು ಉದ್ಯೋಗ ಕಳೆದುಕೊಳ್ಳುವ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ 2 ತಿಂಗಳ ಅವಧಿಯ ವಸತಿ ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು.

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ನಾಗರಿಕ ಬದುಕು ಶೋಚ ನೀಯವಾಗಿದೆ. ಕೋವಿಡ್ ಅಲೆಗಿಂತ ಸರ್ಕಾರದ ತೆರಿಗೆ ಅಲೆಗಳೇ ಜನತೆಯನ್ನು ಕಾಡುವಂತಾಗಿದೆ. 2012ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರ್ಕಾರ ದೇಶದಲ್ಲಿ ಒಂದೇ ದಿನ 12 ಕೋಟಿಗೂ ಅಧಿಕ ಮಕ್ಕಳಿಗೆ ಯಾವುದೇ ನೋಂದಣಿ, ಪ್ರಚಾರ, ನೂಕು ನುಗ್ಗಲು ಇಲ್ಲದೆ ಉಚಿತ ಪೆÇೀಲಿಯೋ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಯಿತು. ಇದರಂತೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಂಡು ಮಕ್ಕಳಿಗೆ ಮತ್ತು ವಯಸ್ಕರಿಗೆ ಲಸಿಕೆ ನೀಡಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ಮಕ್ಕಳಾದ ತನ್ಮಯಿ, ಯಶಸ್ವಿ, ಹೃತ್ವಿಕ್ ಹಾಗೂ ತಳ್ಳು ಗಾಡಿಯ ಹಣ್ಣಿನ ವ್ಯಾಪಾರಿ ಗಳೂ ಪತ್ರಗಳನ್ನು ಪೆಟ್ಟಿಗೆಗೆ ಹಾಕಿದರು. ಪ್ರಭಾರ ಮೇಯರ್ ಅನ್ವರ್‍ಬೇಗ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ.ಅಶೋಕ, ಸಮಿತಿಯ ಮುಖಂಡರಾದ ಚೌಹಳ್ಳಿ ಪುಟ್ಟಸ್ವಾಮಿ, ಲೋಕನಾಥ್‍ಗೌಡ, ಪಿ.ಕುಮಾರ್‍ಗೌಡ, ಸಂಜಯ್‍ಗೌಡ ಮತ್ತಿತರರು ಹಾಜರಿದ್ದರು.

Translate »