ಮೈಸೂರು,ಸೆ.29(ಪಿಎಂ)- ಮಹಾತ್ಮ ಗಾಂಧಿಯವರ ಬಾಲ್ಯ ಕುರಿತಂತೆ ನಿರ್ಮಿಸಿರುವ `ಮೋಹನದಾಸ’ ಕನ್ನಡ ಸಿನಿಮಾ ಅ.1ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಕನ್ನಡ ಚಿತ್ರರಂಗಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಪಿ.ಶೇಷಾದ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆನ್‍ಲೈನ್ ಮೂಲಕ ಮಾತನಾಡಿದ ಪಿ.ಶೇಷಾದ್ರಿ, ಗಾಂಧಿ ಜಯಂತಿಯ ಮುನ್ನ ದಿನವಾದ ಅ.1ರಂದು ಚಿತ್ರ ಬಿಡುಗಡೆಗೊಳ್ಳುವ ಮಾಹಿತಿ ನೀಡಿದರು. `ಮೋಹನದಾಸ’ ನನ್ನ 12ನೇ ಸಿನಿಮಾ. 20 ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಇದೇ ಮೊದಲ ಬಾರಿಗೆ ಜೀವನಚರಿತ್ರೆ ಆಧರಿಸಿ ಸಿನಿಮಾ ಮಾಡಿದ್ದೇನೆ ಎಂದರು.
ಬೊಳುವಾರು ಅವರ `ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ಪುಸ್ತಕವೇ ಈ ಚಿತ್ರದ ಕಥೆಗೆ ಆಧಾರ. ಈ ಸಿನಿಮಾ ಕನ್ನಡದಲ್ಲಿ ತೆರೆ ಕಾಣುತ್ತಿದ್ದು, ಶೀಘ್ರದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಗಳಲ್ಲೂ ತೆರೆಗೆ ಬರಲಿದೆ. ಗಾಂಧಿ ಅವರ 7ರಿಂದ 14 ವರ್ಷದೊಳ ಗಿನ ವಯೋಮಾನದ ಘಟನಾವಳಿಗಳು ಚಿತ್ರದಲ್ಲಿವೆ. ಗುಜ ರಾತ್‍ನ ಪೋರ್ ಬಂದರ್, ರಾಜಕೋಟ್‍ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಗಾಂಧಿ ಅವರು ಹುಟ್ಟಿ ಬೆಳೆದ ಮನೆಯಲ್ಲೂ ಚಿತ್ರೀಕರಣ ಮಾಡಿರುವುದು ವಿಶೇಷ ಎಂದು ಹೇಳಿದರು.
ಈವರೆಗೆ ಗಾಂಧಿಯವರ ಕುರಿತು ಎರಡು ಪ್ರಮುಖ ಚಿತ್ರಗಳು ಬಂದಿವೆ. ಒಂದು, ರಿಚರ್ಡ್ ಆಟನ್ ಬರೋ ಅವರ `ಗಾಂಧಿ’, ಮತ್ತೊಂದು ಶ್ಯಾಮ್ ಬೆನಗಲ್ ಅವರ `ಮೇಕಿಂಗ್ ಆಫ್ ಮಹಾತ್ಮ’ ಆಗಿವೆ. ಈ ಎರಡೂ ಚಿತ್ರಗಳು ತೆರೆ ಕಂಡು ಹಲವು ವರ್ಷಗಳಾ ಗಿವೆ. ಜೊತೆಗೆ ಗಾಂಧಿಯವರ ಬಾಲ್ಯದ ಬಗ್ಗೆ ಈ ಎರಡರಲ್ಲೂ ಇಲ್ಲ. ನಾನು ಈ ಚಿತ್ರದ ಮೂಲಕ ಗಾಂಧಿ ಕುರಿತು ಹೇಳುತ್ತಿಲ್ಲ. ಬದಲಿಗೆ ಮೋಹನದಾಸ ಎಂಬ ಒಬ್ಬ ಸಾಮಾನ್ಯ ಬಾಲಕನ ಬಗ್ಗೆ ಹೇಳಿದ್ದೇನೆ ಎಂದರು. ಇದೇ ವೇಳೆ ಹಾಜರಿದ್ದ ಸದರಿ ಸಿನಿಮಾದಲ್ಲಿ ಗಾಂಧಿಯ 7ನೇ ವರ್ಷ ವಯೋಮಾನದ ಪಾತ್ರದಲ್ಲಿ ಅಭಿನಯಿಸಿರುವ ಪರಂಸ್ವಾಮಿ ಮತ್ತು ಅವರ ತಾಯಿಯೂ ಆದ ರಂಗ ಭೂಮಿ ಕಲಾವಿದೆ ದೀಪ ರವಿ ಶಂಕರ್ `ಮೋಹನದಾಸ’ ಸಿನಿಮಾದ ಪೋಸ್ಟರ್ ಬಿಡು ಗಡೆ ಮಾಡಿದರು.
ಬಳಿಕ ದೀಪ ರವಿಶಂಕರ್ ಮಾತನಾಡಿ, ನಟಿ ಶ್ರುತಿ ಯವರು ಗಾಂಧೀಜಿ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದು, ಹಿರಿಯ ನಟ ದತ್ತಣ್ಣ ಸೇರಿ ದಂತೆ ದೊಡ್ಡ ತಾರಾಗಣದ ಅಭಿನಯ ಇದೆ. ಚಿತ್ರೀಕರಣ ಮುಗಿದು 2 ವರ್ಷಗಳು ಕಳೆದಿವೆ. ಆದರೆ ಕೋವಿಡ್ ಕಾರಣದಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಮೈಸೂರಿನಲ್ಲೂ ಅ.1ರಂದೇ ಸಿನಿಮಾ ತೆರೆ ಕಾಣಲಿದೆ. ಇಲ್ಲಿನ ಯಾವ್ಯಾವ ಚಿತ್ರಮಂದಿರದಲ್ಲಿ ಪ್ರದರ್ಶನ ಇರಲಿದೆ ಎಂಬ ಮಾಹಿತಿ ನಾಳೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಈ ಸಿನಿಮಾ ಪ್ರದರ್ಶನ ಏರ್ಪಡಿಸುವ ಚಿಂತನೆಗಳಿವೆ ಎಂದರು. ಬಾಲನಟ ಪರಂಸ್ವಾಮಿ, ಇವರ ಸಹೋದರಿ ಲಾಸ್ಯ ಗೋಷ್ಠಿಯಲ್ಲಿದ್ದರು.