ನಾಳೆ ಔಷಧ ಅಂಗಡಿಗಳು ಬಂದ್
ಮೈಸೂರು

ನಾಳೆ ಔಷಧ ಅಂಗಡಿಗಳು ಬಂದ್

September 27, 2018

ಮೈಸೂರು:  ಆನ್‍ಲೈನ್ ನಲ್ಲಿ ಔಷಧ ಮಾರಾಟ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಔಷಧ ವ್ಯಾಪಾರಿಗಳ ಸಂಘಟನೆಗಳು ಸೆ.28ರಂದು ಬಂದ್ ನಡೆಸುತ್ತಿದ್ದು, ಅಂದು ಆಸ್ಪತ್ರೆ ಆವರಣದಲ್ಲಿರುವ ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಔಷಧ ಅಂಗಡಿಗಳ ಬಾಗಿಲು ಮುಚ್ಚಲಿವೆ.

ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ಸ್ ಸಂಸ್ಥೆ (ಎಐಓಸಿಡಿ) ಕರೆ ನೀಡಿರುವ ಔಷಧ ಮಳಿಗೆ ಗಳ ಬಂದ್‍ಗೆ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ (ಕೆಸಿಡಿಎ) ಹಾಗೂ ಮೈಸೂರು ಡಿಸ್ಟ್ರಿಕ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ (ಎಂಡಿ ಸಿಡಿಎ) ಬೆಂಬಲ ನೀಡಿವೆ. ಹೀಗಾಗಿ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಔಷಧ ಮಳಿಗೆ ಗಳು ಬಂದ್ ಆಗಲಿವೆ. ಈ ಸಂಬಂಧ ಬುಧ ವಾರ ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಮೈಸೂರಿನ ಪ್ರಮುಖ ಔಷಧ ಮಳಿಗೆಯಾದ ರಘುಲಾಲ್ ಅಂಡ್ ಕಂಪ ನಿಯ ಮಾಲೀಕರಾದ ಎನ್.ರಾಘವನ್, ಆನ್‍ಲೈನ್ ವ್ಯವಸ್ಥೆಯಿಂದ ಸಾಕಷ್ಟು ದುರುಪ ಯೋಗ ಆಗುವ ಸಾಧ್ಯತೆಯೇ ಹೆಚ್ಚು. ರಿಯಾಯಿತಿ ಹೆಸರಿನಲ್ಲಿ ಗ್ರಾಹಕ ರನ್ನು ವಂಚಿಸುವುದು ಇದರಿಂದ ಸುಲಭವಾಗು ತ್ತದೆ. ಜೊತೆಗೆ ಗ್ರಾಹಕರಿಗೆ ಸೂಕ್ತ ಔಷಧ ಗಳನ್ನು ನೀಡದೇ ಹೋಗುವ ಅಪಾಯವೂ ಇದೆ. ಇದರೊಂದಿಗೆ ಬಹುತೇಕ ಸಣ್ಣ ಔಷಧ ಮಳಿಗೆದಾರರು ನಷ್ಟಕ್ಕೆ ತುತ್ತಾಗ ಬೇಕಾಗುತ್ತದೆ. ಈ ಎಲ್ಲಾ ದೃಷ್ಟಿಕೋನದಿಂದ ಇ-ಫಾರ್ಮಸಿ ಆನ್‍ಲೈನ್ ಸೂಕ್ತವಲ್ಲ. ಒಂದು ವೇಳೆ ಇದಕ್ಕೆ ಅವಕಾಶ ಕಲ್ಪಿಸಿದರೂ ಹಲವು ಮಾರ್ಪಾಡು ಗಳು ಅತ್ಯಗತ್ಯವಾಗುತ್ತವೆ ಎಂದು ತಿಳಿಸಿದರು. ಈಗಾಗಲೇ ನಮ್ಮ ಗ್ರಾಹಕರಿಗೆ ಸೆ.28 ರಂದು ಬಂದ್ ಆಗುವ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಜೊತೆಗೆ ಎಲ್ಲಾ ಆಸ್ಪತ್ರೆ ಆವರಣದಲ್ಲಿರುವ ಔಷಧ ಮಳಿಗೆಗಳಿಗೆ ಬಂದ್‍ನಿಂದ ವಿನಾಯಿತಿ ನೀಡಲಾಗಿದೆ. ಅಂದು ಈ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಈ ಮಳಿಗೆಗಳಲ್ಲಿ ಔಷಧ ಗಳನ್ನು ಹೆಚ್ಚಾಗಿ ದಾಸ್ತಾನು ಮಾಡಿಕೊಳ್ಳಲು ಸಲಹೆಯನ್ನು ಈಗಾಗಲೇ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದು. ನಮ್ಮ ಈ ಬಂದ್ ಉದ್ದೇಶ ದಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತಾಸಕ್ತಿಯೂ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

ಅದೇ ರೀತಿ ಪತ್ರಿಕೆಯೊಂದಿಗೆ ಮಾತನಾಡಿದ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಎ.ಕೆ.ಜೀವನ್, ಇ-ಫಾರ್ಮಸಿಯನ್ನು ನಾವು ಸಂಪೂರ್ಣ ವಿರೋಧಿಸುತ್ತಿಲ್ಲ. ಅದರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ತೆಗೆಯಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ಹೊರಡಿಸಿರುವ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದರು.

ಎಸ್‍ಕೆಸಿಡಿಎ: ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇ ಷನ್ (ಎಸ್‍ಕೆಸಿಡಿಎ) ಸಂಘಟನೆ ಬಂದ್‍ಗೆ ಬೆಂಬಲ ನೀಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಎ.ಕೆ.ಜೀವನ್, ಈ ಎಸ್‍ಕೆಸಿಡಿಎ ಇತ್ತೀಚೆಗೆ ಸ್ಥಾಪನೆಯಾದ ಸಂಘಟನೆ. ಅದರ ಉದ್ದೇಶ ಏನೆಂದು ಗೊತ್ತಿಲ್ಲ. ರಾಜ್ಯಾದ್ಯಂತ ಸೆ.28ರಂದು ಔಷಧ ಮಳಿಗೆಗಳು ಬಂದ್ ಆಗುವುದು ಖಚಿತವಾಗಿದ್ದು, ಆಸ್ಪತ್ರೆ ಆವರಣದಲ್ಲಿರುವ ಔಷಧ ಮಳಿಗೆಗಳು ಅಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದು ಎಂದರು.

ಸಾರ್ವಜನಿಕರ ಹಿತದೃಷ್ಟಿ: ಇ-ಫಾರ್ಮಸಿ ಎಂದರೆ ಔಷಧ ಅಂಗಡಿ ಇರುವುದಿಲ್ಲ. ವೈದ್ಯರ ಚೀಟಿ ನೋಡಿ ಔಷಧ ವಿತರಣೆ ಮಾಡಲು ಇಲ್ಲಿ ಅವಕಾಶವೂ ಇರುವುದಿಲ್ಲ. ಇದರಿಂದ ಅಪಾಯ ಆಗುವ ಸಂಭವವನ್ನು ತಳ್ಳಿ ಹಾಕಲಾಗದು. ಜೊತೆಗೆ ನಮ್ಮ ಔಷಧ ಮಳಿಗೆಗಳಿಗೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುವ ಪ್ರಕ್ರಿಯೆ ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಇ-ಫಾರ್ಮಸಿ ವ್ಯವಸ್ಥೆಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಎ.ಕೆ.ಜೀವನ್ ತಿಳಿಸಿದರು. ಇದೇ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಎಂಡಿಸಿಡಿಎ ಅಧ್ಯಕ್ಷ ಕುಮಾರಸ್ವಾಮಿ ಅವರು, ಸೆ.28ರಂದು ಮೈಸೂರು ಜಿಲ್ಲೆಯಾದ್ಯಂತ ಔಷಧ ಮಳಿಗೆ ಬಂದ್ ಆಗುವುದನ್ನು ಖಚಿತಪಡಿಸಿದರು.

ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡಿಸ್ಟ್ರಿಬ್ಯೂಟರ್ ಬೆಂಬಲ ಇಲ್ಲ

ಔಷಧ ಮಳಿಗೆಗಳ ಬಂದ್‍ಗೆ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಬೆಂಬಲ ನೀಡುತ್ತಿಲ್ಲ ಎಂದು ಅಸೋಸಿಯೇಷನ್‍ನ ಕಾರ್ಯದರ್ಶಿ ಎಸ್.ಮಂಜುನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಆನ್‍ಲೈನ್ ಔಷಧ ಮಾರಾಟಕ್ಕೆ ನಮ್ಮ ಅಸೋಸಿಯೇಷನ್‍ನ ವಿರೋಧವಿದೆ. ಆದರೆ ಔಷಧ ಮಾರಾಟ ಸ್ಥಗಿತಗೊಂಡರೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಬಂದ್‍ಗೆ ಬೆಂಬಲ ನೀಡುತ್ತಿಲ್ಲ. ಜೊತೆಗೆ ಔಷಧ ಮಾರಾಟವು ಅಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು. ಸೆ.22ರಂದು ಅಸೋಸಿಯೇಷನ್‍ನ ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಬಂದ್‍ನಲ್ಲಿ ನಮ್ಮ ಸಂಘ ಭಾಗವಹಿಸಬಾರದೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಉದ್ದೇಶಿಸಿರುವ ಆನ್‍ಲೈನ್‍ನಲ್ಲಿ ಔಷಧ ಮಾರಾಟದ (ಇ-ಫಾರ್ಮಸಿ) ನಿಯಮಾವಳಿಗಳು ಈಗಿನ ಔಷಧ ಮತ್ತು ಕಾಂತಿವರ್ಧಕ ಕಾಯ್ದೆ-1940ಕ್ಕೆ ವಿರುದ್ಧವಾಗಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ಕರಡು ನಿಯಮಾವಳಿಯನ್ನು ಹಿಂಪಡೆಯಬೇಕೆಂದು ನಮ್ಮ ಸಂಘದ ವತಿಯಿಂದ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »