ಜಿಲ್ಲಾ ಉಸ್ತುವಾರಿ ಸಚಿವರಾದ ಜಿಟಿಡಿ, ಸಾರಾರಿಂದ ದಸರಾ ಪೋಸ್ಟರ್ಸ್ ಬಿಡುಗಡೆ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರಾದ ಜಿಟಿಡಿ, ಸಾರಾರಿಂದ ದಸರಾ ಪೋಸ್ಟರ್ಸ್ ಬಿಡುಗಡೆ

September 27, 2018

ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ ಮೈಸೂರು ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತವು ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಡಹಬ್ಬದ ಪೂರ್ವಭಾವಿ ಸಭೆ ನಡೆಸಿದರು.

ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯು ಸೆಪ್ಟೆಂಬರ್ 29 ಮತ್ತು 30 ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ದಸರಾ ಗಾಳಿಪಟ ಉತ್ಸವದ ಪ್ರಚಾರ ಪೋಸ್ಟರ್‍ಗಳನ್ನು ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಬಿಡುಗಡೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಜಿ.ಟಿ.ದೇವೇಗೌಡರು, ದಸರಾ ಅಂಗವಾಗಿ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಸೆಪ್ಟೆಂಬರ್ 29 ಮತ್ತು 30 ರಂದು ಗಾಳಿಪಟ ಉತ್ಸವವನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಉತ್ಸವಕ್ಕೆ ಮುಂಬೈ, ಅಹಮದಾ ಬಾದ್, ಸೂರತ್ ಮತ್ತು ಮಂಗಳೂರು ನಗರಗಳಿಂದ ವೃತ್ತಿನಿರತ ಕೈಟ್ ಫ್ಲೈಯರ್ ಗಳನ್ನು ಆಹ್ವಾನಿಸಲಾಗಿದೆ. ಗಾಳಿಪಟ ಕಾರ್ಯಾಗಾರ, ಮನರಂಜನಾ ಕಾರ್ಯಕ್ರಮ ಹಾಗೂ ಫುಟ್ ಟ್ರಕ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು, ಯುವಕರ ಸೃಜನಶೀಲತೆ, ಸ್ಪರ್ಧಾ ಮನೋಭಾವ ಹಾಗೂ ರಚನಾತ್ಮಕ ಚಿಂತನೆಯನ್ನು ವೃದ್ಧಿಸಲು ದಸರಾ ಮಹೋತ್ಸವವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಂಟೇಜ್ ಕಾರ್ ರ‍್ಯಾಲಿ: ಈ ಬಾರಿ ದಸರೆಗೆ ವಿಂಟೇಜ್ ಕಾರ್ ರ‍್ಯಾಲಿ ಏರ್ಪಡಿಸಿದ್ದು, ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ರ‍್ಯಾಲಿಗೆ ಚಾಲನೆ ನೀಡಲಿದ್ದು, ಅಕ್ಟೋಬರ್ 1ರಂದು ಬೆಳಿಗ್ಗೆ ಮೈಸೂರಲ್ಲಿ ಸ್ವಾಗತಿಸಲಾಗುವುದು ಎಂದ ಸಚಿವರು, ಹಳೇ ಕಾರುಗಳನ್ನು ಜನರಿಗೆ ಪರಿಚಯಿಸಲು ಕಾರ್ ರ‍್ಯಾಲಿ ಏರ್ಪಡಿಸಲಾಗಿದೆ ಎಂದರು.

ಯುವ ಸಂಭ್ರಮ: ನಾಡ ಹಬ್ಬವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಪ್ರತೀ ವರ್ಷದಂತೆ ಈ ಬಾರಿಯೂ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೆ ಯುವ ಸಂಭ್ರಮ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು ಬಂದು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವರು ಎಂದು ಜಿ.ಟಿ.ದೇವೇಗೌಡರು ತಿಳಿಸಿದರು.

ಯುವ ದಸರಾ: ಅತ್ಯಂತ ಆಕರ್ಷಕ ಕಾರ್ಯಕ್ರಮಗಳಲ್ಲೊಂದಾದ ಯುವ ದಸರಾವನ್ನು ಅಕ್ಟೋಬರ್ 11ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾದ ಕಾಲೇಜು ತಂಡಗಳಿಗೆ ಯುವ ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಗ್ರಾಮೀಣ ದಸರಾ: ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಹೋಬಳಿ ಕೇಂದ್ರಗಳಲ್ಲಿ ಆಯಾ ತಾಲೂಕುಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಡಿಷನಲ್ ಡಿಸಿ ಟಿ.ಯೋಗೇಶ್, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್‍ಸಿಂಗ್, ಡಿಸಿಪಿಗಳಾದ ಡಾ.ವಿಷ್ಣುವರ್ಧನ್, ಡಾ.ವಿಕ್ರಂ ವಿ.ಅಮಟೆ, ಕೆ.ಆರ್.ಉಪವಿಭಾಗದ ಎಸಿಪಿ ಧರ್ಮಪ್ಪ, ನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್, ಮುಡಾ ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ದಸರಾ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

Translate »