ನ.1ರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ರೈತರ ಸಾಲದ ಹಣ ಜಮಾ
ಮೈಸೂರು

ನ.1ರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ರೈತರ ಸಾಲದ ಹಣ ಜಮಾ

September 27, 2018

ಮಂಡ್ಯ: ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ರೈತ ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ನ. 1ರಿಂದ ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲದ ಹಣವನ್ನು ಭರಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದುವರೆಗೂ ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಸಾಲವನ್ನು ಮಾತ್ರ ಮನ್ನಾ ಘೋಷಣೆ ಮಾಡಿ ಹಣ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ವಿಚಾರ ಅತಂತ್ರವಾಗಿದೆ ಎನ್ನುವ ಮಾತು ಕೇಳಿ ಬಂದಿತು. ಹಾಗಾಗಿ, ನನ್ನ ರೈತರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡುತ್ತಿದ್ದೇನೆ.

ನ. 1 ರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿದ್ದ ರೈತರ ಸಾಲದ ಹಣವನ್ನೂ ಭರಿಸಲು ಕ್ರಮಕೈಗೊಳ್ಳುತ್ತಿದ್ದೇನೆ ಎಂದು ತಿಳಿದರು. ನ. 1ರವರೆಗೆ ಬ್ಯಾಂಕ್‍ಗಳು ರೈತರಿಗೆ ಸಾಲ ವಸೂಲಾತಿಯ ನೋಟೀಸ್ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದು ವೇಳೆ ನನ್ನ ಸೂಚನೆಯ ಹೊರತಾಗಿಯೂ ರೈತರಿಗೆ ನೋಟೀಸ್ ನೀಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಡ್ತಿರದ್ದತಿ ಕುರಿತು ಎಜಿ ಜೊತೆ ಚರ್ಚೆ: ಎಸ್‍ಸಿ, ಎಸ್‍ಟಿ ನೌಕರರಿಗೆ ಮುಂಬಡ್ತಿ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಕುರಿತು ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ಕೋರ್ಟ್ ಏನು ಆದೇಶ ನೀಡಿದೆ ಅದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಸಮಾಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಮತ್ತು ಸಚಿವ ರೇವಣ್ಣ “ಆ ವಿಚಾರ ನಿಮಗೆ ಯಾಕೆ?’’ ಎನ್ನುವ ಮೂಲಕ ಮಾಧ್ಯಮಗಳ ವಿರುದ್ಧ ಗರಂ ಆದ ಪ್ರಸಂಗವೂ ಇದೇ ವೇಳೆ ನಡೆಯಿತು. ಪಕ್ಷ, ನಮ್ಮೊಳಗಿನ ಅಸಮಾಧಾನಗಳನ್ನು ದಾರಿಯಲ್ಲಿ ನಿಂತು ಮಾತನಾಡಲು ಸಾಧ್ಯವಿಲ್ಲ. ನಮ್ಮೊಳಗೆ ಈ ಕುರಿತು ಮಾತನಾಡುತ್ತೇವೆ ಅಂತ ಸಿಎಂ ಕುಮಾರಸ್ವಾಮಿ ಅಂದರೆ, ಸಚಿವ ರೇವಣ್ಣ ನಿಮಗೆ ಯಾಕೆ ಅನ್ನೋ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

Translate »