ಜನರ ನಿರೀಕ್ಷೆಯಂತೆ ಪ್ರವಾಸೋದ್ಯಮ ಅಭಿವೃದ್ಧಿ
News

ಜನರ ನಿರೀಕ್ಷೆಯಂತೆ ಪ್ರವಾಸೋದ್ಯಮ ಅಭಿವೃದ್ಧಿ

March 23, 2021

ಬೆಂಗಳೂರು,ಮಾ.22-ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಹತ್ತು ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತರುವುದಾಗಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ವಿಧಾನಪರಿಷತ್ತಿನಲ್ಲಿ ಹೆಚ್.ಎಂ.ರಮೇಶಗೌಡ ಹಾಗೂ ರಘು ಆಚಾರ್ ಅವರ ಪ್ರಶ್ನೆಗೆ ಉತ್ತರಿಸಿದರು.

ಪ್ರವಾಸೋದ್ಯಮ ಇಲಾಖೆಯ ಮೇಲೆ ಜನತೆ ಬಹಳ ನಿರೀಕ್ಷೆಯಿಟ್ಟು ಕೊಂಡಿದ್ದಾರೆ. ಪ್ರವಾಸಿಗರ ನಿರೀಕ್ಷೆಗೆ ತಕ್ಕಂತೆ ಅವರ ಆಶೋತ್ತರ ಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಹೆಚ್ಚು ಹಣವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಿ, ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ನಂದಿ ಬೆಟ್ಟಕ್ಕೆ ರೋಪ್-ವೇ, 320 ಕಿ.ಮೀ ಉದ್ದದ ಕಡಲ ತೀರಕ್ಕೆ ಹಲವಾರು ಯೋಜನೆಗಳು, ಹೆಲಿ ಟೂರಿಸಂ ಸೇರಿದಂತೆ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವುದಾಗಿ ಸಚಿವ ಯೋಗೇಶ್ವರ್ ಭರವಸೆ ನೀಡಿದರು.

ಚನ್ನರಾಯಪಟ್ಟಣದ ನಂದಿನಿ ಹೈ-ಟೆಕ್ ಘಟಕ ಡೈರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಫೆಬ್ರವರಿಯಲ್ಲಿ ತಪಾಸಣೆ ಮಾಡಿದ್ದು, ಈ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡಿದೆ. ಬಾಯ್ಲರ್ ನಿಂದ ಉತ್ಪತ್ತಿಯಾಗುವ ಬೂದಿಯನ್ನು ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ. ಹಾಗೂ ರೈತರಿಗೆ ವಿತರಿಸಲಾಗುತ್ತಿದೆ ಎಂದು ಎಂ.ಎ.ಗೋಪಾಲಸ್ವಾಮಿಯವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಈ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯ ಇತರೆ ರಾಸಾಯನಿಕ ಗಳು, ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೇ ಕೆರೆಗಳಿಗೆ ಹಾಗೂ ಹಳ್ಳ-ಕೊಳ್ಳಗಳಿಗೆ ಹರಿಸುತ್ತಿರುವ ಬಗ್ಗೆ ಯಾವುದೇ ರೀತಿ ದೂರುಗಳು ಬಂದಿಲ್ಲ. ಮುಂದಿನ ತಿಂಗಳು ತಾವೇ ಖುದ್ದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆಗೆ ಚನ್ನರಾಯಪಟ್ಟಣದ ನಂದಿನಿ ಹೈಟೆಕ್ ಘಟಕಕ್ಕೆ ಭೇಟಿ ನೀಡುವುದಾಗಿ ಸಚಿವರು ತಿಳಿಸಿದರು.

Translate »