ದಸರಾ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಪ್ರವಾಸೋದ್ಯಮ ಸಚಿವರ ಭೇಟಿ
ಮೈಸೂರು

ದಸರಾ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಪ್ರವಾಸೋದ್ಯಮ ಸಚಿವರ ಭೇಟಿ

March 3, 2021

ಮೈಸೂರು, ಮಾ.2(ಎಸ್‍ಬಿಡಿ)- ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮಂಗಳವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಅಲಹಾಬಾದ್ ಘಟಕದ ಎಕ್ಸಿಕ್ಯುಟಿವ್ ಸೆಕ್ರೆಟರಿ ಡಾ.ನೀರಜ್ ಕುಮಾರ್, ಬೆಂಗಳೂರಿನ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸಸ್ ಇಂಡಿಯಾದ ನಿರ್ದೇಶಕಿ ಕೆ.ಸಾಧನ, ಕ್ಯೂರೇಟರ್ ಡಾ.ಸಾಜು ಬಾಸ್ಕರನ್, ಪ್ರಾಧಿಕಾರದ ಸಿಇಓ ಗಿರೀಶ್ ಮತ್ತಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ಮೈಸೂರಿನ ಹೃದಯ ಭಾಗದಲ್ಲಿ ಪ್ರಾಧಿಕಾರ 80 ಎಕರೆ ಪ್ರದೇಶ ಹೊಂದಿದೆ. ಪೂರ್ವದಲ್ಲಿ ಮೃಗಾಲಯ, ಪಶ್ಚಿಮದಲ್ಲಿ ಅರಮನೆ ಸೇರಿದಂತೆ ಹಲವು ಪ್ರವಾಸಿ ತಾಣಗಳು ಸಮೀಪದಲ್ಲಿರುವ ಕಾರಣ ಪ್ರವಾಸಿಗರು ನಿತ್ಯ ಈ ಮಾರ್ಗದಲ್ಲೇ ಸಂಚರಿಸುತ್ತಾರೆ. ಹಾಗಾಗಿ ಇಲ್ಲಿ `ದೆಹಲಿ ಹಾತ್’ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ 2016 ಆಯವ್ಯಯದಲ್ಲೇ ಘೋಷಿಸಲಾಗಿದೆ. ವರ್ಷದ ಎಲ್ಲಾ ದಿನದಲ್ಲೂ ವಸ್ತು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಿದರೆ ಸಾವಿರಾರು ವ್ಯಾಪಾರಿಗಳ ಜೀವನಕ್ಕೆ ಆಧಾರವಾಗುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗುತ್ತದೆ. ಎಂದು ಸಚಿವರಿಗೆ ಮನದಟ್ಟು ಮಾಡಿದರಲ್ಲದೆ, ಮುಂದಿನ ಬಜೆಟ್‍ನಲ್ಲಿ ಅಗತ್ಯವಾದ 165 ಕೋಟಿ ರೂ. ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಅದ್ಧೂರಿ ಸ್ವಾಗತ: ಇದಕ್ಕೂ ಮುನ್ನ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಪ್ರಾಧಿಕಾರ ಆವರಣದ ದ್ವಾರದಿಂದ ಮಂಗಳವಾದ್ಯ, ಡೊಳ್ಳು ಕುಣಿತ ಇನ್ನಿತರ ಜಾನಪದ ಕಲಾತಂಡ ಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮುಖಂಡರು, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹೀಗೆ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು, ಮಾರ್ಗದುದ್ದಕ್ಕೂ ಸಚಿವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.

 

Translate »