ಅಕ್ರಮ ಪಡಿತರ ಅಕ್ಕಿ ಸಾಗಾಣೆ: ಓರ್ವ ಬಂಧನ
ಮೈಸೂರು

ಅಕ್ರಮ ಪಡಿತರ ಅಕ್ಕಿ ಸಾಗಾಣೆ: ಓರ್ವ ಬಂಧನ

October 5, 2020

ಮೈಸೂರು, ಅ.4(ಎಂಟಿವೈ)-ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬನನ್ನು ಡಿಸಿಐಬಿ ಪೊಲೀಸರು ಬಂಧಿಸಿ ಒಂದು ಒಮಿನಿ ವಾಹನ ಹಾಗೂ 1050 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ. ಮಂಡ್ಯ ನಿವಾಸಿ ಸನಾವುಲ್ಲಾ(42) ಬಂಧಿತ ಆರೋಪಿಯಾಗಿದ್ದು, ನಂಜನ ಗೂಡು ತಾಲೂಕು ವಿವಿಧೆಡೆ 1 ಕೆ.ಜಿ.ಗೆ 12 ರೂ.ಗೆ ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂಜನಗೂಡಿ ನಿಂದ ಒಮಿನಿ ವ್ಯಾನ್‍ನಲ್ಲಿ (ಕೆಎ-09, ಎಂ-4223) ಅಕ್ಕಿ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮೈಸೂರು ತಾಲೂಕಿನ ಉತ್ತನಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿ ವಾಹನವನ್ನು ಫುಡ್ ಇನ್ಸ್‍ಪೆಕ್ಟರ್ ವೇಣುಗೋಪಾಲ್ ಅವರೊಂದಿಗೆ ಡಿಸಿಐಬಿ ಪೊಲೀಸರು ತಡೆದು ಪರಿಶೀಲಿಸಿದಾಗ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿರುವುದು ಕಂಡು ಬಂದಿದೆ.

ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಸನಾವುಲ್ಲಾ ನಂಜನಗೂಡು ಸುತ್ತಮುತ್ತ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಕೆ.ಜಿ.ಗೆ 12 ಅಥವಾ 13 ರೂ. ನೀಡಿ ಖರೀದಿಸಿ ಮಂಡ್ಯಗೆ ಕೊಂಡೊಯ್ದು, ರೀ ಪಾಲೀಷ್ ಮಾಡಿಸಿ ಕೆ.ಜಿ.ಗೆ 40 ರೂ.ಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ವಶಪಡಿಸಿಕೊಂಡ 1050 ಕೆ.ಜಿ. ಅಕ್ಕಿಯಲ್ಲಿ 5 ಕೆ.ಜಿ. ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 50 ಕೆ.ಜಿ. ಮೇಲ್ಪಟ್ಟು ಪಡಿತರ ಅಕ್ಕಿಯನ್ನು ಸಾಗಾಣೆ ಮಾಡಿದರೆ, ಅಪರಾಧವಾಗಲಿದ್ದು, ಪೊಲೀಸರು ಅಕ್ಕಿ ಮಾರುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಈ ಪ್ರಕರಣವನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆÉ ಡಿಸಿಐಬಿ ಪೊಲೀಸರು ವರ್ಗಾಯಿಸಿದ್ದಾರೆ. ಎಸ್‍ಪಿ ಸಿ.ಬಿ.ರಿಷ್ಯಂತ್ ಎಎಸ್‍ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ಎಂ.ಸಿ.ರವಿಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಸುನೀಲ್, ಸಿ.ಎಸ್.ರಾಮಪ್ರಸಾದ್, ಎಂ.ಕೆ. ಸಂದೀಪ್, ಹರೀಶ್‍ಕುಮಾರ್, ಚಾಲಕ ಚಿಕ್ಕಲಿಂಗು ಪಾಲ್ಗೊಂಡಿದ್ದರು.

 

 

Translate »