ಮೈಸೂರು

ಮೈಸೂರು ಜಿಲ್ಲೆಯಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿಲ್ಲ ಆತಂಕ ಬೇಡ: ಡಿಸಿ ರೋಹಿಣಿ ಸಿಂಧೂರಿ ಅಭಯ

January 7, 2021

ಮೈಸೂರು, ಜ.6(ಎಂಟಿವೈ)- ಮೈಸೂರಿಗೆ ಬ್ರಿಟನ್‍ನಿಂದ ವಾಪಸ್ ಬಂದ ಯಾರೊ ಬ್ಬರಲ್ಲೂ `ರೂಪಾಂತರಿ ಕೊರೊನಾ’ ಪತ್ತೆಯಾಗಿಲ್ಲ. ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯೂರೋಪ್ ದೇಶಗಳಿಂದ ಮೈಸೂರಿಗೆ ಇತ್ತೀಚೆಗೆ ವಾಪಸಾದ 137 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಒಬ್ಬರಲ್ಲಿ ಪಾಸಿಟಿವ್ ವರದಿ ಬಂದಿತ್ತು. ಬೆಂಗಳೂರಿನ ಪ್ರಯೋಗಾಲಯಕ್ಕೆ ಅವರ ಸ್ವ್ಯಾಬ್ ಸ್ಯಾಂಪಲ್ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯನ್ನು ಸರ್ಕಾರ ಇಂದು ಬೆಳಗ್ಗೆ ಪ್ರಕಟಿಸಿದ್ದು, ಮೈಸೂರಿನ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದರು. ಯೂರೋಪ್‍ನಿಂದ ಬಂದ ಉಳಿದವರೆಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಂದಲೂ ಬ್ರಿಟನ್ ವೈರಸ್ ಹರಡುವ ಭೀತಿ ಇಲ್ಲ. ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೇ ಮಾಸ್ಕ್ ಧರಿಸಿ, ಆಗ್ಗಿಂದಾಗ್ಗೆ ಕೈ ಸ್ವಚ್ಛ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮೈಸೂರಲ್ಲಿ ಲಸಿಕೆ ಅಭಿಯಾನಕ್ಕೆ ಸಕಲ ಸಿದ್ಧತೆ: ಡಿಸಿ: ಕೊರೊನಾ ವಿರುದ್ಧದ ಲಸಿಕೆ ಅಭಿಯಾನಕ್ಕೆ ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆಯಾಗಿದೆ. ಮೊದಲ ಹಂತದಲ್ಲಿ 32 ಸಾವಿರ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಲಸಿಕೆ ನೀಡುವುದಕ್ಕೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ 162 ಪಾಯಿಂಟ್‍ಗಳನ್ನು ಗುರುತಿಸಿದ್ದೇವೆ. ಪ್ರತಿ ಕೇಂದ್ರದಲ್ಲಿ 5 ವ್ಯಾಕ್ಸಿನೇಟರ್, ಸ್ಟೋರೇಜ್, ಅಗತ್ಯ ಸೌಲಭ್ಯ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ವಾರಿಯರ್ಸ್ ಗಳಾಗಿದ್ದ 15 ಸಾವಿರ ಸರ್ಕಾರಿ ಹಾಗೂ 17 ಸಾವಿರ ಖಾಸಗಿ ಸಿಬ್ಬಂದಿಗೆ ಲಸಿಕೆ ನೀಡುವುದ ರಲ್ಲಿ ಆದ್ಯತೆ ನೀಡಲಾಗುತ್ತಿದೆ. 100ಕ್ಕಿಂತ ಹೆಚ್ಚು ಜನರಿರುವ ಖಾಸಗಿ ಆಸ್ಪತ್ರೆಗಳಿಗೂ ಜಿಲ್ಲಾಡಳಿತದಿಂದಲೇ ಲಸಿಕೆ ಸರಬರಾಜು ಮಾಡುತ್ತೇವೆ. ಶಿಷ್ಟಾಚಾರದ ಪ್ರಕಾರ ಮೊದಲು ಮುಂಚೂಣಿ ವಾರಿಯರ್ಸ್, ನಂತರ ವಯಸ್ಸಾದವರಿಗೆ ಆದ್ಯತೆ. ಸಾರ್ವಜನಿಕರಿಗೆ ಸದ್ಯ ಲಸಿಕೆ ಹಾಕುವುದಿಲ್ಲ. ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬೇಕಾದ ಮಾಹಿತಿಯೂ ಬಂದಿಲ್ಲ ಎಂದು ಸಷ್ಟಪಡಿಸಿದರು. ಲಸಿಕೆ ಅಭಿಯಾನ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ. ಲಸಿಕೆ ಯಾವಾಗ ಪೂರೈಕೆ ಯಾಗುತ್ತದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಡಿಸಿ ಹೇಳಿದರು.

17 ಲಕ್ಷ ಲಸಿಕೆ ಸಂರಕ್ಷಿಸಿಡುವ ವ್ಯವಸ್ಥೆ: ಮೈಸೂರು ಜಿಲ್ಲೆಗೆ ವಿವಿಧ ವ್ಯಾಕ್ಸಿನ್ ಸರಬರಾಜು ಮಾಡಲು ಡಿಹೆಚ್‍ಒ ಕಚೇರಿ ಸಮೀಪದ 2 ವ್ಯಾಕ್ಸಿನ್ ಶೇಖರಣಾ ಘಟಕದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಘಟಕದಲ್ಲಿ ದೊಡ್ಡ ಗಾತ್ರದ 2 ವ್ಯಾಕ್ಸಿನ್ ಕೂಲರ್ ಇದ್ದು, ಪ್ರತಿ ಕೂಲರ್‍ನಲ್ಲಿ ತಲಾ 8.5 ಲಕ್ಷ (ಒಟ್ಟು 17 ಲಕ್ಷ) ಲಸಿಕೆ ಸಂಗ್ರಹಿಸಿಡಬಹುದಾಗಿದೆ. ಜ.13ರ ನಂತರ ಕೋವಿಡ್ ಲಸಿಕೆ ಮೈಸೂರಿಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Translate »